ಭೀಮಾ ನೀರಿಗೆ ವೈದ್ಯಕೀಯ ತ್ಯಾಜ್ಯ!
ಕನ್ನಡಪ್ರಭ ವಾರ್ತೆ , ಯಾದಗಿರಿ , ಏ.13
ಇಲ್ಲಿಗೆ ಸಮೀಪದ ಗುರುಸಣಗಿಯಲ್ಲಿ ಭೀಮಾ ನದಿಗೆ ಕಟ್ಟಿರುವ ಬ್ಯಾರೇಜ್ ನೀರಿಗೆ ಆರೋಗ್ಯ ಇಲಾಖೆಯಿಂದ ವಿತರಿಸುವ ಮಾತ್ರೆ, ಉಪಯೋಗಿಸಿದ ಸಿರೆಂಜ್, ಔಷಧ, ಬಳಸಿದ ಹತ್ತಿ ಇತ್ಯಾದಿ ವೈದ್ಯಕೀಯ ತ್ಯಾಜ್ಯಗಳನ್ನು ಲಾರಿಗಟ್ಟಲೆ ಎಸೆಯಲಾಗಿದ್ದು, ಬ್ಯಾರೇಜ್ನಲ್ಲಿ ಸಂಗ್ರಹವಾಗಿರುವ ಕುಡಿವ ನೀರು ಕಲುಷಿತಗೊಂಡಿರುವ ಘಟನೆ ನಡೆದಿದೆ.
ಬ್ಯಾರೇಜ್ ಮೇಲಿಂದ ಲಾರಿಗಟ್ಟಲೆ ಮಾತ್ರೆಗಳನ್ನು ಎಸೆಯಲಾಗಿದ್ದು, ಅವು ನೀರಿನಲ್ಲಿ ಸೇರಿವೆ. ಮತ್ತೆ ಕೆಲವು ನದಿ ದಡದಲ್ಲಿ ರಾಶಿರಾಶಿಯಾಗಿ ಬಿದ್ದಿವೆ. ಇದರಿಂದ ಬ್ಯಾರೇಜ್ನಲ್ಲಿ ಸಂಗ್ರಹವಾಗಿರುವ ನೀರು ಕಲುಷಿತಗೊಂಡಿದ್ದು, ಮೀನು ಹಾಗೂ ಜಲಚರಗಳು ಮೃತಪಟ್ಟಿವೆ.
ಗುರುಸಣಗಿ ಗ್ರಾಮದ ಜನತೆಗೆ ಇದೇ ನೀರನ್ನು ಕುಡಿಯಲು ಪೂರೈಕೆ ಮಾಡಲಾಗುತ್ತಿದ್ದು, ಗ್ರಾಮಸ್ಥರು ಬಳಸಲು ಹಿಂಜರಿಯುತ್ತಿದ್ದಾರೆ. ಎಸೆದಿರುವ ಮಾತ್ರೆಗಳು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡಲು ಸರ್ಕಾರದಿಂದ ಪೂರೈಕೆಯಾಗಿವೆ. ಇವುಗಳಲ್ಲಿ ಬಹುತೇಕ ಮಾತ್ರೆಗಳು ಡೇಟ್ ಬಾರ್ ಆಗಿದ್ದು, ಇನ್ನು ಕೆಲವು ಮೇ ತಿಂಗಳವರೆಗೆ ಎಕ್ಸ್ಪೈರಿ ಡೇಟ್ ಹೊಂದಿವೆ.
ನೀರಿಗೆ ವೈದ್ಯಕೀಯ ತ್ಯಾಜ್ಯ: ಈ ಮಾತ್ರೆಗಳನ್ನು ಯಾರು ಎಸೆದಿದ್ದಾರೆ ಎನ್ನುವುದು ಗೊತ್ತಾಗಿಲ್ಲ. ಶುಕ್ರವಾರವೇ ಇವುಗಳನ್ನು ಎಸೆದಿರುವ ಬಗ್ಗೆ ಶಂಕೆಯಿದೆ. ಶನಿವಾರ ಬೆಳಗ್ಗೆ ಗ್ರಾಮಸ್ಥರಿಗೆ ಈ ವಿಷಯ ಗೊತ್ತಾಗಿದ್ದು, ನದಿ ತೀರದಲ್ಲಿ ಮೀನುಗಳು ಸತ್ತು ಬಿದ್ದಿರುವುದು ಕಂಡುಬಂದಿದೆ. ವೈದ್ಯಕೀಯ ತ್ಯಾಜ್ಯಗಳನ್ನು ಅಪಾಯಕಾರಿ ರೀತಿಯಲ್ಲಿ ಎಸೆದಿರುವ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಎಸೆದಿರುವ ಬಹುತೇಕ ಮಾತ್ರೆಗಳ ಅವಧಿ ಮುಗಿದಿದೆ. ಉಪಯೋಗಿಸಿದ ಸೂಜಿ, ಔಷಧಿ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯಲಾಗಿದೆ. ಇವು ನೀರಿನಲ್ಲಿ ಮಿಶ್ರಣವಾಗಿ ಕಲುಷಿತಗೊಂಡಿರುವ ಶಂಕೆಯಿದೆ. ಆದ್ದರಿಂದಲೇ ನದಿ ಪಕ್ಕದಲ್ಲಿ ಮೀನುಗಳು ಸತ್ತಿವೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಪರಿಶೀಲಿಸಿ ಕ್ರಮ: ಈ ವಿಷಯವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಗಮನಕ್ಕೆ ತಂದಾಗ, ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಸ್ಥಳಕ್ಕೆ ಕಿರಿಯ ಔಷಧಿ ತಜ್ಞ ವಿಜಯಕುಮಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ನದಿ ಪಕ್ಕದಲ್ಲಿ ಎಸೆದಿರುವ ಮಾತ್ರೆ, ಔಷಧಿ ಬಾಟಲಿಗಳನ್ನು ತೆಗೆದು ಸ್ವಚ್ಛಗೊಳಿಸಲಾಗುವುದು. ಅಲ್ಲದೇ ಅವುಗಳ ಬ್ಯಾಡ್ಜ್ ಸಂಖ್ಯೆ ಆಧರಿಸಿ ಯಾವ ಆಸ್ಪತ್ರೆಗೆ ಪೂರೈಕೆಯಾದ ಸಾಮಗ್ರಿ ಎನ್ನುವುದನ್ನು ಪತ್ತೆ ಹಚ್ಚಲಾಗುವುದು. ಇವು ಸರ್ಕಾರದಿಂದ ಪೂರೈಕೆಯಾದ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಚಿತವಾಗಿ ವಿತರಿಸಲು ನೀಡಿದ್ದು ಎಂದು ತಿಳಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ನೀರಿನಲ್ಲಿ ಎಸೆದಿರುವ ಮಾತ್ರೆಗಳನ್ನು ಹೇಗೆ ತೆಗೆಯುವುದು ಎನ್ನುವುದು ಸಮಸ್ಯೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ನಗರಕ್ಕೂ ಇದೇ ನೀರು: ಯಾದಗಿರಿ ನಗರದ ಜನತೆಗೂ ಗುರುಸಣಗಿ ಬ್ಯಾರೇಜ್ನಿಂದ ಸಂಗ್ರಹವಾದ ನೀರನ್ನೇ ಪೂರೈಸಲಾಗುತ್ತದೆ. ಬ್ಯಾರೇಜ್ನಿಂದ ಒಂದು ಕಿಮೀ ಕೆಳಭಾಗದಲ್ಲಿ ಯಾದಗಿರಿ ನಗರಕ್ಕೆ ಪೂರೈಕೆಯಾಗುವ ಜಾಕ್ವೆಲ್ ಇದ್ದು, ಅಲ್ಲಿಗೂ ಮಾತ್ರೆಯಿಂದ ಕಲುಷಿತಗೊಂಡಿರುವ ನೀರು ಹೋಗುತ್ತದೆ. ಆದ್ದರಿಂದ ಇದು ಗುರುಸಣಗಿ ಗ್ರಾಮಸ್ಥರು ಹಾಗೂ ನಗರದ ಜನತೆಗೆ ಆತಂಕ ತಂದಿದೆ.
ಈ ಬಗ್ಗೆ ನಗರಸಭೆ ಸೂಕ್ತ ಕ್ರಮ ಕೈಗೊಳ್ಳಬೇಕು. ವೈದ್ಯಕೀಯ ತ್ಯಾಜ್ಯವನ್ನು ಅಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು. ಅಲ್ಲದೇ ನೀರನ್ನು ಶುದ್ಧೀಕರಿಸಿ ಪೂರೈಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.