ಮತದಾರರಿಗೆ ಬಾಡೂಟ, ಸಾಮಗ್ರಿ ಜಪ್ತಿ
ಯಾದಗಿರಿ: ಶಹಾಪುರ ತಾಲೂಕಿನ ವಡಗೇರಾ ಹತ್ತಿರದ ಕಂಟಿ ತಾಂಡಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಇರುವ ಪಂಪಣ್ಣ ಮುಸ್ತಾಜಿರ ಎಂಬವರ ಜಮೀನಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ ಮತದಾರರಿಗಾಗಿ ಮಾಡಲಾಗುತ್ತಿದ್ದ ಮಾಂಸಹಾರಿ ಆಹಾರ ಸಾಮಗ್ರಿಗಳನ್ನು ಫ್ಲೈಯಿಂಗ್ ಸ್ಕ್ವಾಡ್ ಇಲಿಯಾಸ್ ಅಹಮದ್ ಹಾಗೂ ಎಂಸಿಸಿ ತಂಡದ ಎಲ್.ಜೆ. ಪಾಟೀಲ್ ನೇತೃತ್ವದಲ್ಲಿ ಶುಕ್ರವಾರ ಜಂಟಿ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿಕೊಂಡಿದೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಈ ಸಾಮಗ್ರಿ ಜಪ್ತಿ ಮಾಡಿ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸುಮಾರು 200 ಜನರಿಗೆ ಊಟವನ್ನು ತಯಾರಿಸಲಾಗುತ್ತಿರುವುದನ್ನು ಗಮನಿಸಿ ಈ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿದ್ದು, ಎರಡು ಅನ್ನದ ದೊಡ್ಡ ಪಾತ್ರೆ, 180 ಸ್ಟೀಲ್ ತಟ್ಟೆ, ಪಾತ್ರೆ ಮುಚ್ಚಳಿಕೆ, ಪ್ಲಾಸ್ಟಿಕ್ ಡ್ರಮ್, 3 ನೀರಿನ ಕೊಡ, 4 ಸ್ಟೀಲ್ ಬಕೆಟ್ ಇನ್ನಿತರ ಅಡುಗೆ ಸಾಮಗ್ರಿಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.