17ರಂದು ವಿಚಾರ ಸಂಕಿರಣ
ಸಿಂಧನೂರು: ಸಿಂಧನೂರಿನ ಮನುಜಮತ ಬಳಗದಿಂದ ಆರ್ಜಿಎಂ ಕಾಲೇಜಿನ ಆವರಣದಲ್ಲಿ ಏ.17 ರಂದು ಸಂಜೆ 6 ಗಂಟೆಗೆ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ ಎಂದು ಕಾರ್ಯದರ್ಶಿ ಬಸವರಾಜ ಬಾದರ್ಲಿ ತಿಳಿಸಿದ್ದಾರೆ. ಚುನಾವಣೆಗಳು ಮತ್ತು ಪ್ರಜಾಪ್ರಭುತ್ವ ಕುರಿತು ವಿಚಾರ ಸಂಕಿರಣದಲ್ಲಿ ವಿವಿಧ ವಲಯಗಳ ಚಿಂತಕರು ಚರ್ಚೆ ನಡೆಸಲಿದ್ದಾರೆ. ಕಾರ್ಯಕ್ರಮವನ್ನು ರಾಜ್ಯ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಡಾ. ಕೆ.ಮರಳಸಿದ್ದಪ್ಪ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಮನುಜಮತ ಬಳಗದ ಅಧ್ಯಕ್ಷ ಡಿ.ಎಚ್. ಕಂಬಳಿ ವಹಿಸುವರು. ಮುಖ್ಯ ಅತಿಥಿಗಳಾಗಿ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ, ಸಾಂಸ್ಕೃತಿಕ ಚಿಂತಕ ಡಾ. ಬಂಜಿಗೆರೆ ಜಯಪ್ರಕಾಶ, ಚಲನಚಿತ್ರ ನಿರ್ದೇಶಕ ನಂಜುಂಡೇಗೌಡ ಭಾಗವಹಿಸುವರು. ಕಾರ್ಯಕ್ರಮದಲ್ಲಿ ಮನುಜಮತ ಬಳಗದ ಸದಸ್ಯರಾದ ರಾಮಬಾಬು ಅರಗಿನಮರ ಕ್ಯಾಂಪ್, ನಿರುಪಾದೆಪ್ಪ ಗುಡಿಹಾಳ ವಕೀಲರು ಪಾಲ್ಗೊಳ್ಳುವರು. ಕಾರ್ಯಕ್ರಮಕ್ಕೆ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಿದ್ದಾರೆ.
19ರಂದು ಜಾಗೃತಿ ಜಾಥಾ
ರಾಯಚೂರು: ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆಯಿಂದ ಏ. 19ರಂದು ಚುನಾವಣೆಯ ಹಿನ್ನೆಲೆಯಲ್ಲಿ ಜಾಗೃತಿ ಕಾಲ್ನಡಿಗೆ ಜಾಥಾ ಮತ್ತು ಸಮಾವೇಶವನ್ನು ಆಯೋಜಿಸಲಾಗಿದೆ. ಈ ಸಮಾವೇಶವನ್ನು ಈ ಮೊದಲು ಏ. 13ರಂದು ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಸದ್ಯ ಸಮಾವೇಶ ಮತ್ತು ಜಾಗೃತಿ ಜಾಥಾ ಏ. 19ರಂದು ನಡೆಯಲಿದ್ದು, ಅಂದು ನಗರದ ಎಲ್ಲ ಸ್ಲಂಗಳ ನಿವಾಸಿಗಳು ಹಾಗೂ ವೇದಿಕೆಯ ವಿವಿಧ ಘಟಕಗಳ ಪದಾಧಿಕಾರಿಗಳು ಜಾಥಾದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ವೇದಿಕೆಯ ಅಧ್ಯಕ್ಷ ತಾಯಣ್ಣ ಹೊಸೂರು, ಪ್ರಧಾನ ಕಾರ್ಯದರ್ಶಿ ಜನಾರ್ದನ ಹಳ್ಳಿಬೆಂಚಿ ಮನವಿ ಮಾಡಿದ್ದಾರೆ.
ಬಡಾವಣೆಗೆ ನಾಮಕರಣ
ರಾಯಚೂರು: ನಗರದ 28ನೇ ವಾರ್ಡಿನ ಜೋಪಡಿ ಪಟ್ಟಿ ಬಡಾವಣೆಗೆ ಈಚೆಗೆ ಶ್ರೀಸದ್ಗುರು ಶರಣ ತಿಪ್ಪೇಶ್ವರ ಸ್ವಾಮಿ ಬಡಾವಣೆ ಎಂದು ನಾಮಕರಣ ಮಾಡಲಾಯಿತು. ಶರಣ ತಿಪ್ಪೇಶ್ವರಸ್ವಾಮಿ ಅವರ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಮಫಲಕವನ್ನು ಬಡಾವಣೆಯ ಮುಖಂಡರಾದ ಬಸವ ಸಾಗರ್, ಕೆ.ಆನಂದ್, ಬಾಬಾಖಾನ್, ಶೇಖ್ ಹುಸೇನ್ ಬಾಷಾ, ಶೇಕ್ ಮೈನುದ್ದೀನ್, ಆನಂದ ರೆಡ್ಡಿ, ನಿಂಗಪ್ಪ, ಮಲ್ಲೇಶ್, ಹೊನ್ನಪ್ಪ ಇದ್ದರು.