'ಕೈ' ಟಿಕೆಟ್ ಹಂಚಿಕೆಯಲ್ಲಿ ಹಸ್ತಕ್ಷೇಪ, ವಾಗ್ವಾದ
ಲಿಂಗಸ್ಗೂರು: ಲಿಂಗಸ್ಗೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿಕೆಟ್ ಹಂಚಿಕೆಯಲ್ಲಿ ಹಸ್ತಕ್ಷೇಪ ಮಾಡದಿರುವಂತೆ ಕುಷ್ಟಗಿ ಮಾಜಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರರ ಜೊತೆ ಪಕ್ಷದ ಕಾರ್ಯಕರ್ತರು ವಾಗ್ವಾದ ನಡೆಸಿದ ಘಟನೆ ಭಾನುವಾರ ಜರುಗಿತು.
ಊಹಾಪೋಹ: ಪಟ್ಟಣದ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯ ನಂತರ, ದಲಿತ ಮುಖಂಡರಾದ ದೇವಪ್ಪ ಕರಡಕಲ್, ಗ್ಯಾನಪ್ಪ ಆನೆಹೊಸೂರು ಮತ್ತು ಶಿವಪ್ಪ ಮಾಚನೂರ ಅವರು, ಲಿಂಗಸ್ಗೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಈಗಾಗಲೇ ಪಕ್ಷದ ಹೈಕಮಾಂಡ್ ಪಾಮಯ್ಯ ಮುರಾರಿ ಅವರ ಹೆಸರು ಘೋಷಣೆ ಮಾಡಿದೆ. ಆದರೆ ಮುರಾರಿ ಬದಲಾಗಿ ಡಿ.ಎಸ್. ಹೂಲಿಗೇರಿ ಅವರಿಗೆ ಟಿಕೆಟ್ ಕೊಡಿಸಲು ತಾವು ಪ್ರಯತ್ನ ನಡೆಸಿರುವ ಕುರಿತು ಊಹಾಪೋಹಗಳು ಕೇಳಿ ಬರುತ್ತಿವೆ. ಕಾರಣ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಶ್ರಮಿಸಿದ ಪಾಮಯ್ಯ ಮುರಾರಿಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
ತೀವ್ರ ಪೈಪೋಟಿ: ಇದಕ್ಕೆ ಪ್ರತಿಕ್ರಿಯಿಸಿದ ಅಮರೇಗೌಡ ಬಯ್ಯಾಪುರ, ಲಿಂಗಸ್ಗೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷದಿಂದ ಸ್ಪರ್ಧಿಸಲು ಆಕಾಂಕ್ಷಿಗಳು ತೀವ್ರ ಪೈಪೋಟಿ ನಡೆಸಿದ್ದರು. ಕೆಲ ಅಭ್ಯರ್ಥಿ ಆಕಾಂಕ್ಷಿಗಳ ಪರವಾಗಿ ಪಕ್ಷದ ಹಿರಿಯ ಮುಖಂಡರಂತೆ ಈ ಹಿಂದೆ ನಾನು ಡಿ.ಎಸ್. ಹುಲಿಗೇರಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸಿದೆ. ಆದರೆ ಪಕ್ಷದ ಹೈಕಮಾಂಡ್ ಪಾಮಯ್ಯ ಮುರಾರಿ ಅವರ ಹೆಸರು ಘೋಷಿಸಿದ್ದರಿಂದ ಈಗ ನಾನು ಯಾವುದೇ ಹಸ್ತಕ್ಷೇಪ ನಡೆಸಿಲ್ಲ. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಅವರ ಗೆಲವಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆಂದು ಸ್ಪಷ್ಟಪಡಿಸಿದರು.