ವಿಜೃಂಭಣೆಯ ಕೆಂಚಮ್ಮ ದೇವಿ ಜಾತ್ರೆ
ಕ.ಪ್ರ. ವಾರ್ತೆ, ಸಿಂಧನೂರು, ಏ.14
ನಗರದ ವಾರ್ಡ್ ನಂ. 20ರ ಪ್ರಶಾಂತನಗರದಲ್ಲಿ ಜಗನ್ಮಾತೆ ಕೆಂಚಮ್ಮದೇವಿಯ ಜಾತ್ರಾ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.
ರುದ್ರಾಭಿಷೇಕ, ಸಪ್ತ ಭಜನೆ ನಂತರ ವಿವಿಧ ವಾದ್ಯಮೇಳಗಳೊಂದಿಗೆ ಗಂಗಾಸ್ಥಳಕ್ಕೆ ತೆರಳಲಾಯಿತು. ನಂತರ ಸಮಗಾರ ಹರಳಯ್ಯ ಸಮಾಜದವರ ಸಾಮೂಹಿಕ ವಿವಾಹ ಜರುಗಿತು. ವಿಜಯಕುಮಾರ ಬದಿ ಮತ್ತು ರಾಘವೇಂದ್ರ ಬದಿ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ರಂಗೋಲಿ ಸ್ಪರ್ಧೆ, ಯುವಕರಿಗಾಗಿ ಗಡಿಗೆ ಒಡೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಸಮಗಾರ ಹರಳಯ್ಯ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಗಂಗಾವತಿ, ಮಾನವಿ, ಮಸ್ಕಿ, ಕುಷ್ಟಗಿ, ಇಳಕಲ್, ಹುನಗುಂದ, ಬಾಗಲಕೋಟೆ, ಧಾರವಾಡ ಮತ್ತಿತರ ಕಡೆಗಳಿಂದ ಭಕ್ತರು ಆಗಮಿಸಿದ್ದರು.
ಸನ್ಮಾನ: ಬಸಾಪುರದ ಶಿವಾನಂದ ಸ್ವಾಮಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಸುರೇಶ, ಭೀಮಣ್ಣ ಮಬ್ರುಂಕರ, ಅರವಿಂದ ಹೊಸಮನಿ, ರಾಜಶೇಖರ, ಶಿವಾನಂದ ಮಬ್ರುಂಕರ, ಮಲ್ಲಪ್ಪ ಹೊಸಮನಿ, ಪರಶುರಾಮ ಕಬಾಡಿ, ಚಂದ್ರಶೇಖರ, ಚಿದಾನಂದಪ್ಪ ಮಬ್ರುಂಕರ ಅವರನ್ನು ದೇವಸ್ಥಾನ ಸಮಿತಿಯಿಂದ ಸನ್ಮಾನಿಸಲಾಯಿತು.
ಬಸಪ್ಪ ದ್ಯಾವಣ್ಣ ಬೆನಕನಹಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಗಾರ ಹರಳಯ್ಯ ಸಮಾಜದ ಜಿಲ್ಲಾಧ್ಯಕ್ಷ ಚಂದ್ರಹಾಸ ಮಬ್ರುಂಕರ, ಕಾರ್ಯದರ್ಶಿ ರಾಘವೇಂದ್ರ ಮಬ್ರುಂಕರ, ಖಜಾಂಚಿ ಯಮನಪ್ಪ ಮುಂಡೇವಾಡಿ, ಮಲ್ಲಪ್ಪ ದ್ಯಾವಣ್ಣ ಬೆನಕನಹಳ್ಳಿ, ಖ್ಯಾತ ಕಲಾವಿದ ವಾಜಿದ್ ಸಾಜಿದ್ ಮಾನ್ವಿ, ಲಾಲಪ್ಪ ಮತ್ತಿತರರು ಇದ್ದರು.