ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕೆಟ್ಟ ರಾಜಕೀಯ ವ್ಯವಸ್ಥೆ: ರಾಮಣ್ಣ

Lingaraj Badiger
Updated On : 16 Apr 2013, 11:06 am

ರಾಯಚೂರು: ಕೆಟ್ಟ ರಾಜಕೀಯ ವ್ಯವಸ್ಥೆಗೆ ಉತ್ತಮ ರಾಜಕಾರಣದ ಮೂಲಕವೇ ಪರಿಹಾರ ಸಾಧ್ಯ. ಈ ಹಿನ್ನೆಲೆಯಲ್ಲಿ ಕಳೆದ 4 ದಶಕಗಳಿಂದ ಜನಪರ ಮತ್ತು ಸಾಮಾಜಿಕ ಸಂಘಟನೆಗಳಲ್ಲಿ ಕಾರ್ಯನಿರ್ವಹಿಸಿರುವ ತಾವು ಪ್ರಸಕ್ತ ಚುನಾವಣೆಯಲ್ಲಿ ಲೋಕಸತ್ತಾ ಪಾರ್ಟಿಯಿಂದ ನಗರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವುದಾಗಿ ಅಭ್ಯರ್ಥಿ ರಾಮಣ್ಣ ಆರ್.ಎಚ್.ಜೆ. ತಿಳಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿವೃತ್ತ ಐಎಸ್ ಅಧಿಕಾರಿ ಜಯಪ್ರಕಾಶ್ ಅವರು ಸ್ಥಾಪಿಸಿರುವ ಲೋಕಸತ್ತಾ ಪಾರ್ಟಿಯು ಪ್ರಾಮಾಣಿಕರ ಪಕ್ಷವಾಗಿದೆ. ಮತದಾರರಿಂದಲೇ ದೇಣಿಗೆ ಮತ್ತು ಮತ ಸಂಗ್ರಹಿಸುವ ಮೂಲಕ ಚುನಾವಣೆ ಎದುರಿಸುವುದಾಗಿ ತಿಳಿಸಿದರು. ಈ ವೇಳೆ ರಾಯಚೂರು ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಗುರುಸ್ವಾಮಿ ನಾಯಕ ಸೇರಿದಂತೆ ಅನೇಕರಿದ್ದರು.
ಮತದಾನ ಜಾಗೃತಿ ಮ್ಯಾರಾಥಾನ್
ರಾಯಚೂರು: ನಗರದಲ್ಲಿ ಮತದಾರರಲ್ಲಿ ಮತದಾನದ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಿಂದ ಮ್ಯಾರಾಥಾನ್ ಏರ್ಪಡಿಸಲಾಗಿತ್ತು.  ಮ್ಯಾರಾಥಾನ್‌ನಲ್ಲಿ ಪಾಲ್ಗೊಂಡಿದ್ದ ಜಿಲ್ಲಾಡಳಿತ, ಜಿಪಂ, ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲೂಕಿನ ಲೋಕ ಶಿಕ್ಷಣ ಕೇಂದ್ರಗಳ ಪ್ರೇರಕರು, ವಿವಿಧ ಸ್ವಯಂ ಸೇವಕರು, ಸಾಕ್ಷರತಾ ಮತ್ತು ಜನ ಶಿಕ್ಷಣ ಸಂಸ್ಥಾನದ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ವಿದ್ಯಾರ್ಥಿ- ವಿದ್ಯಾರ್ಥಿನಿಯರು, ಈಶ್ವರಿ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಪದಾಧಿಕಾರಿಗಳು ಕಡ್ಡಾಯವಾಗಿ ಮತ ಚಲಾಯಿಸುವಂತೆ ಪ್ರತಿಜ್ಞೆ ಸ್ವೀಕರಿಸಿದರು. ಮ್ಯಾರಾಥಾನ್ ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಅಂಬೇಡ್ಕರ್ ವೃತ್ತದವರೆಗೆ ನಡೆಯಿತು.
ಭಾರಿ ಭದ್ರತೆಗೆ ಪಡೆ
ರಾಯಚೂರು: ಜಿಲ್ಲೆಯಲ್ಲಿ ಮೇ 5ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗಳನ್ನು ಶಾಂತಿಯುತವಾಗಿ ಮತ್ತು ಸುಗಮವಾಗಿ ನಡೆಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದ್ದು, ರಕ್ಷಣಾ ಕಾರ್ಯಕ್ಕಾಗಿ ಕೇಂದ್ರದ ಮೀಸಲು ಪಡೆಯ ಸಿಬ್ಬಂದಿ ಜಿಲ್ಲಾದ್ಯಂತ ಬಿಗಿ ಕಾವಲು ಒದಗಿಸುತ್ತಿದ್ದಾರೆ. ನಗರದಲ್ಲಿ ಸೋಮವಾರ ನಾಮಪತ್ರ ಸಲ್ಲಿಕೆ ವೇಳೆ 50ಕ್ಕೂ ಹೆಚ್ಚಿನ  ಕೇಂದ್ರ ಮೀಸಲು ಪಡೆಯ ಸಿಬ್ಬಂದಿ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಭದ್ರತೆ ಒದಗಿಸಿದ್ದು ಕಂಡು ಬಂದಿತು. ಅದೇ ರೀತಿ ನೂರಾರು ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ಸಹ ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಜಿಲ್ಲೆಯ ಎಲ್ಲ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕೇಂದ್ರ ಮೀಸಲು ಪಡೆಯ ಸಿಬ್ಬಂದಿ ಚುನಾವಣೆಯ ಹಿನ್ನೆಲೆ ಭದ್ರತೆ ಒದಗಿಸುತ್ತಿದ್ದಾರೆಂದು ಮೂಲಗಳು ಹೇಳಿವೆ.
ಜೆಡಿಎಸ್‌ಗೆ ನೇಮಕ
ಸಿಂಧನೂರು: ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಸೈಯದ್ ಫಾರುಕ್ ಹುಸೇನ್ ಅವರನ್ನು ನೇಮಕ ಮಾಡಲಾಗಿದೆ ಎಂದು ಜೆಡಿಎಸ್ ತಾಲೂಕಾಧ್ಯಕ್ಷ ಎಂ.ಲಿಂಗಪ್ಪ ತಿಳಿಸಿದ್ದಾರೆ. ಕೂಡಲೇ ಫಾರುಕ್ ಹುಸೇನ್ ಪಕ್ಷದ ಬಲವರ್ಧನೆ ಹಾಗೂ ಸಂಘಟನೆಗೆ ತೊಡಗಬೇಕು. ಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ವೆಂಕಟರಾವ್ ನಾಡಗೌಡರ ಗೆಲವಿಗೆ ಶ್ರಮಿಸಬೇಕು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement