ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಟಿಕೆಟ್: ದಲಿತ ಅಭ್ಯರ್ಥಿಗೆ ಕಾಂಗ್ರೆಸ್ ಅನ್ಯಾಯ'

Lingaraj Badiger
Updated On : 16 Apr 2013, 11:05 am

ಲಿಂಗಸ್ಗೂರು: ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಲಿಂಗಸ್ಗೂರು ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ನೀಡಿಕೆಯಲ್ಲಿ ಅಸ್ಪೃಶ್ಯ ದಲಿತ ಅಭ್ಯರ್ಥಿಗೆ ಅನ್ಯಾಯ ಮಾಡಲಾಗಿದೆ ಎಂದು ದಲಿತ ಮುಖಂಡ, ಸಾಹಿತಿ ಸಿ. ದಾನಪ್ಪ ಆರೋಪಿಸಿದ್ದಾರೆ.
ಸ್ಥಳೀಯ ಖಾಸಗಿ ವಸತಿಗೃಹದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಚುನಾವಣೆಯಿಂದ ಲಿಂಗಸ್ಗೂರು ಮೀಸಲು ಕ್ಷೇತ್ರವಾಗಿದ್ದು, ಪ್ರಸಕ್ತ ಚುನಾವಣೆಯಲ್ಲಿ ಸ್ಥಳೀಯ ಅಸ್ಪೃಶ್ಯ ದಲಿತ ಜನಾಂಗದ ಪಾಮಯ್ಯ ಮುರಾರಿ ಅವರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಪ್ರಥಮ ಪಟ್ಟಿಯಲ್ಲಿ ಘೋಷಿಸಿತ್ತು.
ನಂತರ ಭಾನುವಾರ 2ನೇ ಪಟ್ಟಿ ಪ್ರಕಟಿಸಿದಾಗ ಅದರಲ್ಲಿ ಪಾಮಯ್ಯ ಮುರಾರಿ ಹೆಸರು ಬದಲು ಉದ್ಯಮಿ ಡಿ.ಎಸ್. ಹೂಲಗೇರಿ ಹೆಸರು ಘೋಷಣೆ ಮಾಡಿರುವುದು ಅಸ್ಪೃಶ್ಯ ದಲಿತರಿಗೆ ಮಾಡಿದ ಅನ್ಯಾಯ. ಇದಕ್ಕೆ ಕುಷ್ಟಗಿ ಹಂಗಾಮಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಹಾಗೂ ಮಾಜಿ ಸಚಿವ ಎನ್.ಎಸ್. ಭೋಸರಾಜ್ ಅವರೇ ನೇರ ಕಾರಣರಾಗಿದ್ದಾರೆ ಎಂದು ದೂರಿದರು.
ಬಯ್ಯಾಪುರರ ಜಾತಿ ಮನೋಭಾವ: ಈ ಹಿಂದೆ ನಡೆದ ಚುನಾವಣೆಯಲ್ಲಿ ಮಾದಿಗ, ಛಲವಾದಿ ಸೇರಿದಂತೆ ದಲಿತರ ಮತಗಳು ನಿರ್ಣಾಯಕ ಪಾತ್ರವಹಿಸಿದ್ದು, ಮೀಸಲು ಕ್ಷೇತ್ರದಲ್ಲಿ ಮೂಲ ದಲಿತರಿಗೆ ಸ್ಪರ್ಧಿಸಲು ಅವಕಾಶ ನೀಡದಿರುವುದನ್ನು ಗಮನಿಸಿದರೆ ಪರೋಕ್ಷವಾಗಿ ಪ್ರಭುತ್ವಶಾಹಿ, ದೌರ್ಜನ್ಯ ಶಾಹಿ, ಗೌಡಿಕೆ ಹಾಗೂ ವಸಾಹತುಶಾಹಿ ಪದ್ಧತಿ ಮರುಕಳಿಸುತ್ತಿರುವಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಬಯ್ಯಾಪುರ ಅವರ ಜಾತಿ ಮನೋಭಾವ ಎದ್ದು ಕಾಣುತ್ತಿದ್ದು, ಅಸ್ಪೃಶ್ಯರಲ್ಲದವರಿಗೆ ಟಿಕೆಟ್ ಕೊಡಿಸುವಲ್ಲಿ ಯಶ ಕಂಡಿದ್ದಾರೆ ಎಂದು ಆಪಾದಿಸಿದರು.
ಕಾಂಗ್ರೆಸ್‌ಗೆ ಬೆಂಬಲಿಸದಿರಲು ನಿರ್ಧಾರ: ಇದರಿಂದ ಮನನೊಂದ ಅಸ್ಪೃಶ್ಯ ದಲಿತ ಸಮುದಾಯ ಪ್ರಸಕ್ತ ಚುನಾವಣೆಯಲ್ಲಿ ಲಿಂಗಸ್ಗೂರು ಮತ್ತು ಕುಷ್ಟಗಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸದಂತೆ ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಜನಾಂಗದ ಎಲ್ಲರ ಜೊತೆ ಚರ್ಚಿಸಿ ಯಾವ ಪಕ್ಷಕ್ಕೆ ಬೆಂಬಲಿಸಬೇಕು ಎಂಬುದನ್ನು ತೀರ್ಮಾನಿಸಲಾಗುವುದು ಎಂದು ತಿಳಿಸಿದರು. ನಾಗಪ್ಪ ಈಚನಾಳ, ಶಿವಪ್ಪ ಮಾಚನೂರ, ಹನುಮಂತಪ್ಪ ವೆಂಕಟಾಪುರ, ಆನಂದ, ಗ್ಯಾನಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement