ಕೆಜೆಪಿ ಗೆಲ್ಲಿಸಿದರೆ ಕೆಂಭಾವಿ ತಾಲೂಕು, ಕ್ಷೇತ್ರ ದತ್ತು
ಕನ್ನಡಪ್ರಭ ವಾರ್ತೆ, ಕೆಂಭಾವಿ, ಏ.16
ಈ ಬಾರಿ ಕೆಜೆಪಿಗೆ ಉತ್ತಮ ಭವಿಷ್ಯವಿದ್ದು, ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ. ಆಗ ಕೆಂಭಾವಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಿ, ಶಹಾಪುರ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ದತ್ತು ಪಡೆಯಲಾಗುವುದು ಎಂದು ಕೆಜೆಪಿ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.
ಪಟ್ಟಣದಲ್ಲಿ ಮಂಗಳವಾರ ಕೆಜೆಪಿ ಅಭ್ಯರ್ಥಿ ಗುರು ಪಾಟೀಲ ಶಿರವಾಳ ಪರವಾಗಿ ಪ್ರಚಾರ ನಡೆಸಿದ ಅವರು, ದೇಶದಲ್ಲಿ ಪ್ರಜಾತಂತ್ರದ ವ್ಯವಸ್ಥೆಯನ್ನು ಮಾಡಿರುವ ನಾವು ರಾಜ್ಯ, ದೇಶವನ್ನು ಆಳಲು ಉತ್ತಮ ಪಕ್ಷಕ್ಕೆ ಬಹುಮತ ನೀಡಿ ಆರಿಸಿ ಕಳಿಸಬೇಕು. ಇದು ಪ್ರತಿಯೊಬ್ಬ ಮತದಾರನ ಕರ್ತವ್ಯವಾಗಿದೆ ಎಂದರು.
ನಿಮ್ಮ ಒಂದೊಂದು ಮತವೂ ಅಮೂಲ್ಯವಾಗಿದ್ದು, ಆ ಒಂದು ಮತ ಒಬ್ಬ ವ್ಯಕ್ತಿಯನ್ನು ಮುಖ್ಯಮಂತ್ರಿ ಸ್ಥಾನಕ್ಕೂ ಕೂಡಿಸಬಹುದು. ಆದ್ದರಿಂದ ಪ್ರತಿಯೊಬ್ಬರೂ ಉತ್ತಮ ವ್ಯಕ್ತಿಗೆ ಮತ ನೀಡಬೇಕು. ಈ ಬಾರಿ ಕೆಜೆಪಿ ಬೆಂಬಲಿಸುವ ಮೂಲಕ ಗುರು ಪಾಟೀಲರ ಕೈ ಬಲಪಡಿಸಬೇಕು. ಮುಂಬರುವ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದ್ದು, ಕೆಂಭಾವಿಯನ್ನು ತಾಲೂಕು ಕೇಂದ್ರ ಮಾಡಿ ಮತ್ತು ಶಹಾಪುರ ಕ್ಷೇತ್ರವನ್ನು ದತ್ತು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ರೈತಪರ ಕೆಜೆಪಿ ಆಯ್ಕೆ ಮಾಡಿ: ಬಿಜೆಪಿ ಹಾಗೂ ಕಾಗ್ರೆಸ್ ಆಡಳಿತಕ್ಕೆ ಬೇಸತ್ತ ಜನತೆ ಈ ಬಾರಿ ಕೆಜೆಪಿಯನ್ನು ಅಧಿಕಾರಕ್ಕೆ ತರುವ ಮೂಲಕ ಆಶೀರ್ವದಿಸುತ್ತಾರೆ. ಬಿಜೆಪಿಯಲ್ಲಿ ನಾನು ನಿಷ್ಠೆಯಿಂದ ಕೆಲಸ ಮಾಡಿದೆ. ಆದರೆ ಸ್ವಾರ್ಥಿಗಳು ಮತ್ತು ಕೆಲ ಕಿಡಗೇಡಿಗಳು ನನ್ನ ಬೆನ್ನಿಗೆ ಚೂರಿ ಹಾಕುವ ಮೂಲಕ ಪಕ್ಷದಿಂದ ಹೊರಹೋಗುವಂತೆ ನೋಡಿಕೊಂಡರು. ಆದ್ದರಿಂದ ಈ ಬಾರಿಯ ವಿಧಾನಸಭೆಯ ಚುನಾವಣೆಯಲ್ಲಿ ಕೆಜೆಪಿಗೆ ನೀವೆಲ್ಲರೂ ಆಶೀರ್ವದಿಸಬೇಕು. ನಾನು ರೈತ ಕುಟುಂಬದಿಂದ ಬಂದವನು. ರೈತರ ಸಮಸ್ಯೆಗಳೇನು ಎಂಬುದು ನನಗೆ ಗೊತ್ತು. ಅದ್ದರಿಂದ ರೈತ ಪರವಾದ ನಮ್ಮ ಪಕ್ಷವನ್ನು ಈ ಬಾರಿಯ ಚುನಾವಣೆಯಲ್ಲಿ ಆರಿಸಿ ಕಳಿಸಬೇಕೆಂದು ಮನವಿ ಮಾಡಿದರು.
ತಮ್ಮೆಲ್ಲರ ಸಹಕಾರ- ವಿಶ್ವಾಸ: ಬಿಜೆಪಿಯನ್ನು ಅಧಿಕಾರಕ್ಕೆ ತರಲು ನಾನು ಏನೆಲ್ಲಾ ಪ್ರಯತ್ನ ಮಾಡಿದೆ. ಆದರೆ ಅದು ಯಾವುದಕ್ಕೂ ಅವಕಾಶ ಕೊಡದೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನನ್ನನ್ನು ಪಕ್ಷದಲ್ಲಿ ಇಲ್ಲದಂತೆ ಮಾಡಲು ಹುನ್ನಾರ ನಡೆಸಿದರು. ಆದರೆ ಅದ್ಯಾವುದಕ್ಕೂ ಕಿವಿಗೊಡದೆ, ಎದೆಗುಂದದೆ ನನ್ನ ಅಪಾರ ಬೆಂಬಲಿಗರೊಂದಿಗೆ ನಾನು ಪಕ್ಷವನ್ನು ಸ್ಥಾಪಿಸಬೇಕಾಯಿತು. ಇದಕ್ಕೆ ರಾಜ್ಯದ ಜನತೆಯ ಸಂಪೂರ್ಣ ಸಹಕಾರವಿದೆ ಎಂಬ ವಿಶ್ವಾಸ ನನಗಿದೆ.
ದುರಾಡಳಿತಕ್ಕೆ ಹೆಸರುವಾಸಿಯಾದ ಕಾಂಗ್ರೆಸ್ ಅನೇಕ ನಾಯಕರು ರಾಜ್ಯದ ಅಧಿಕಾರ ಗದ್ದುಗೆಗೆ ಏರಬೇಕೆಂಬ ಆಸೆಯಿಂದ ಈಗಾಗಲೇ ತಮ್ಮ ತಮ್ಮಲ್ಲೇ ಆಂತರಿಕ ಗುದ್ದಾಟ ಪ್ರಾರಂಭಿಸಿದ್ದಾರೆ. ಆದರೆ ಇದಾವುದಕ್ಕೂ ರಾಜ್ಯದ ಜನತೆ ಅವಕಾಶ ಕೊಡದೇ ಕೆಜೆಪಿಗೆ ಸಂಪೂರ್ಣ ಬೆಂಬಲ ನೀಡಬೇಕು. ಈ ಭಾಗದ ಜನತೆ ಗುರು ಪಾಟೀಲ ಅವರನ್ನು ಸ್ಪಷ್ಟ ಬಹುಮತದಿಂದ ಆರಿಸಿ ತರುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಬಿಎಸ್ವೈ ಜನಪರ ಕಾರ್ಯ ಶ್ರೀರಕ್ಷೆ: ಅಭ್ಯರ್ಥಿ ಗುರು ಪಾಟೀಲ ಶಿರವಾಳ ಮಾತನಾಡಿ, ನಮ್ಮ ತಂದೆಯವರಾದ ದಿ. ಶಿವಶೇಖರಪ್ಪಗೌಡ ಪಾಟೀಲ ಅವರು ಮಾಡಿದ ಜನಪರ ಕೆಲಸಗಳೇ ನನಗೆ ಶ್ರೀರಕ್ಷೆ. ಮಾಜಿ ಸಿಎಂ ಯಡಿಯೂರಪ್ಪ ಅವರು ಮಾಡಿದ ಜನಹಿತ ಕಾರ್ಯದಿಂದ ಈ ಭಾಗದ ಜನತೆ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. ಮತದಾರರು ಈ ಸಲ ಬದಲಾವಣೆ ಬಯಸಿದ್ದು ಕೆಜೆಪಿಯಿಂದ ಕಣಕ್ಕಿಳಿದಿರುವ ನನ್ನನ್ನು ಆರಿಸಿ ತರುವರೆಂಬ ವಿಶ್ವಾಸವಿದೆ ಎಂದರು.
ಕೆಜೆಪಿ ಸೇರ್ಪಡೆ: ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ಮುಖಂಡ ತಾಹೇರ ಪಾಶಾ ಖಾಜಿ ಮಾತನಾಡಿದರು. ಇದೇ ವೇಳೆ ಶಹಾಪುರ ಪುಸಭೆಯ ಜೆಡಿಎಸ್ ಸದಸ್ಯೆ ಲಲಿತಮ್ಮ ಸೇರಿದಂತೆ ವಿವಿಧ ಗ್ರಾಮಗಳ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಕೆಜೆಪಿ ಸೇರಿದರು.
ಕೆಜೆಪಿ ಜಿಲ್ಲಾಧ್ಯಕ್ಷ ಡಾ. ಮಲ್ಲನಗೌಡ ಉಕ್ಕಿನಾಳ, ಬಸಮ್ಮ ಶಿವಶೇಖರಪ್ಪ ಶಿರವಾಳ, ಮಲ್ಲಣ್ಣ ಮಡ್ಡಿ, ಇಬ್ರಾಹಿಂ ಶಿರವಾಳ, ಲಾಲ ಅಹ್ಮದ್ ಖುರೇಶಿ, ಡಾ. ಚಂದ್ರಶೇಖರ ಸುಬೇದಾರ, ರಾಮಚಂದ್ರ ಕಾಶಿರಾಜ, ಬಸವರಾಜ ಆಲಿಮನಿ, ಮಾನಯ್ಯ ಹಾದಿಮನಿ, ಲಾಲಹ್ಮದ್ ಜಾಲಿಬಂಚಿ, ರಾಜಶೇಖರ ಗೂಗಲ್, ಸುಧಾಕರ ಡಿಗ್ಗಾವಿ, ಸುರೇಶ ಸೊನ್ನದ, ರವಿ ಸೊನ್ನದ, ಅಮ್ಮಣ್ಣ ಧರಿ, ಮಶಾಕ ಸಾಸನೂರ, ಈಶ್ವರ ಬಡಿಗೇರ, ಸಂಗಣ್ಣ ಇಜೇರಿ, ಭೀಮನಗೌಡ ಕಾಚಾಪುರ, ಸುಬಾಸ ಮ್ಯಾಗೇರಿ, ದೇವೇಂದ್ರ ಜಾಲಿಬಂಚಿ ಇತರರು ಇದ್ದರು.
ಡಾ. ನಾಯ್ಕಲ್ ಕೆಜೆಪಿ ರಾಜ್ಯ ಕಾರ್ಯದರ್ಶಿ
ಯಾದಗಿರಿ: ಯಾದಗಿರಿ ವಿಧಾನಸಭಾ ಕ್ಷೇತ್ರದ ಕೆಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ. ಶರಣಭೂಪಾಲರೆಡ್ಡಿ ನಾಯ್ಕಲ್ ಅವರನ್ನು ಪಕ್ಷದ ರಾಜ್ಯ ಕಾರ್ಯದರ್ಶಿಯನ್ನಾಗಿ ನಿಯುಕ್ತಿಗೊಳಿಸಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆದೇಶಿಸಿದ್ದಾರೆ.
ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲು ಜಿಲ್ಲೆಗೆ ಆಗಮಿಸಿರುವ ಯಡಿಯೂರಪ್ಪ ಅವರು ಮಂಗಳವಾರ ಈ ಆದೇಶ ಹೊರಡಿಸಿದ್ದಾರೆ. ಟಿಕೆಟ್ ನೀಡದ್ದರಿಂದ ಬೇಸರಗೊಂಡಿದ್ದ ಡಾ. ನಾಯ್ಕಲ್ ಅವರ ನಿವಾಸಕ್ಕೆ ತೆರಳಿ ಸಮಾಧಾನ ಹೇಳಿದ ಯಡಿಯೂರಪ್ಪ, ಮುಂದೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದರು. ಅಲ್ಲದೇ ರಾಜ್ಯ ಕಾರ್ಯದರ್ಶಿ ಹುದ್ದೆಯನ್ನು ತಕ್ಷಣ ವಹಿಸಿಕೊಂಡು, ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ತಿಳಿಸಿದ್ದಾರೆ.