ಕೆಜೆಪಿ ನಿರ್ಣಾಯಕ ಪಾತ್ರ: ಶ್ರುತಿ
ಸಿಂಧನೂರು: ಮುಂದಿನ ಸರ್ಕಾರ ರಚನೆಯಲ್ಲಿ ಕೆಜೆಪಿ ಪಕ್ಷ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷೆ, ಚಿತ್ರನಟಿ ಶ್ರುತಿ ಭವಿಷ್ಯ ನುಡಿದರು. ನಗರದ ಕೆಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಯಾವುದೇ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತರು ಸಿಗುವುದು ಕಷ್ಟ. 50- 60 ವರ್ಷಗಳಷ್ಟು ಇತಿಹಾಸ ಹೊಂದಿದ ಪಕ್ಷಗಳು ಕಾರ್ಯಕರ್ತರ ಕೊರತೆಯಿಂದ ಬಳಲುತ್ತಿವೆ. ಕೇವಲ ಆರೇ ತಿಂಗಳಲ್ಲಿ ಕರ್ನಾಟಕ ಜನತಾ ಪಾರ್ಟಿ ಸದೃಢ ಕಾರ್ಯಕರ್ತರನ್ನು ಹೊಂದುವ ಮೂಲಕ ಪ್ರಮುಖ ಪಕ್ಷವಾಗಿ ಹೊರಹೊಮ್ಮಿದೆ. ಮತದಾರರನ್ನು ಸೃಷ್ಟಿಸುವುದು ಸರಳ. ಆದರೆ ಕಾರ್ಯಕರ್ತರನ್ನು ಸೃಷ್ಟಿಸುವುದು ಬಹು ಕಷ್ಟ ಎಂದು ಹೇಳಿದರು. ರಾಜ್ಯದ 60 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ನಡೆಸಿದ್ದು ಪಕ್ಷಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಹೆಚ್ಚಿನ ಪ್ರಚಾರವನ್ನು ನಡೆಸಬೇಕೆಂದು ಕರೆ ನೀಡಿದರು. ಮಹಿಳೆಯರಿಗೆ ಹೆಚ್ಚು ಒತ್ತು ಕೊಡುವ ಮೂಲಕ ಅವರನ್ನು ಪ್ರಚಾರದಲ್ಲಿ ತೊಡಗಿಸಿಕೊಳ್ಳಿ. ಪುರುಷ ಮತದಾರರಷ್ಟೇ ಮಹಿಳಾ ಮತದಾರರ ಬಗ್ಗೆಯೂ ಕಾಳಜಿ ಇರಲಿ. ಚುನಾವಣೆಯಲ್ಲಿ ಮಹಿಳಾ ಮತದಾರರ ಪಾತ್ರ ಬಹುಮುಖ್ಯ ಎಂದು ಹೇಳಿದರು. ಕೆಜೆಪಿ ಯುವ ಘಟಕದ ರಾಜ್ಯಾಧ್ಯಕ್ಷ ಜಗದೀಶ ಹಿರೇಮನಿ ಮಾತನಾಡಿ, ಕೆಜೆಪಿ ಉದಯವಾಯಿತು ಬಿಜೆಪಿ ಬರಿದಾಯಿತು. ಯುವಕರು ಹೆಚ್ಚೆಚ್ಚು ಕೆಜೆಪಿ ಕಡೆ ಆಕರ್ಷಿತರಾಗುತ್ತಿದ್ದು, ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯಲು ಯಡಿಯೂರಪ್ಪ ಅವರ ಕೈಬಲಪಡಿಸಲು ಯದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು. ಈ ವೇಳೆ ಕೆಜೆಪಿ ಅಭ್ಯರ್ಥಿ ರಾಜಶೇಖರ ಪಾಟೀಲ್, ಶರಣೇಗೌಡ ಬೆನ್ನೂರು, ಎಂ.ಡಿ. ನದೀಮುಲ್ಲಾ, ನಗರಸಭೆ ಸದಸ್ಯ ಲಿಂಗರಾಜ ಹೂಗಾರ, ಕೆಜೆಪಿ ತಾಲೂಕು ಗ್ರಾಮೀಣ ಘಟಕದ ಅಧ್ಯಕ್ಷ ಮಂಜುನಾಥಗೌಡ ರೌಡಕುಂದಾ ಇದ್ದರು.
ನಾಡಗೌಡ ಸುಳ್ಳು
ಪ್ರಚಾರ: ಆರೋಪ
ಸಿಂಧನೂರು: ತಾವು ಮಾಡಿರದ ಅಭಿವೃದ್ಧಿ ಕಾಮಗಾರಿಗಳನ್ನು ತಾವೇ ಮಾಡಿದ್ದೇವೆಂದು ಶಾಸಕ ವೆಂಕಟರಾವ್ ನಾಡಗೌಡರು ಚುನಾವಣಾ ಪ್ರಚಾರಕ್ಕೆ ಹೋದ ಕಡೆಗಳಲ್ಲೆಲ್ಲ ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಬಿಎಸ್ಸಾರ್ ಕಾಂಗ್ರೆಸ್ ಮುಖಂಡ ಕೆ. ಲಿಂಗರಾಜ ಆರೋಪಿಸಿದ್ದಾರೆ. ಹೊಸಳ್ಳಿ ಕ್ರಾಸ್ನಿಂದ ಅಮರಾಪುರದವರೆಗಿನ 2 ಕಿಮೀ ರಸ್ತೆ ಡಾಂಬರೀಕರಣ ಕಾಮಗಾರಿಯು ಕೆ.ವಿರೂಪಾಕ್ಷಪ್ಪ ಅವರು ಸಂಸದರಾಗಿದ್ದಾಗ ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿ ಸುಮಾರು 97 ಲಕ್ಷ ಸಂಸದರ ಅನುದಾನದಲ್ಲಿ ನಿರ್ಮಿಸಲಾಗಿದೆ. ಈ ಕಾಮಗಾರಿಯನ್ನು ಗುತ್ತಿಗೆ ಪಡೆದಿದ್ದ ಮಲ್ಲಿಕಾರ್ಜುನ ಪಾಟೀಲರು ನಿರ್ವಹಿಸಿದ್ದರು. ಇದಕ್ಕೆ ರಸ್ತೆಯ ಪಕ್ಕ ಹಾಕಲಾಗಿರುವ ಕಾಮಗಾರಿ ಫಲಕವೇ ಸಾಕ್ಷಿಯಾಗಿದೆ. ಆದರೆ ತಾಲೂಕಿನ ಹೊಸಳ್ಳಿ ಇ.ಜೆ. ಗ್ರಾಮಕ್ಕೆ ಚುನಾವಣೆ ಪ್ರಚಾರಕ್ಕೆ ಬಂದಿದ್ದ ಶಾಸಕ ನಾಡಗೌಡರು, ತಾವೇ ಆ ರಸ್ತೆ ಕಾಮಗಾರಿ ಮಂಜೂರು ಮಾಡಿಸಿರುವುದಾಗಿ ಸುಳ್ಳು ಪ್ರಚಾರ ಮಾಡಿರುವುದನ್ನು ಬಿಎಸ್ಸಾರ್ ಕಾಂಗ್ರೆಸ್ ಮುಖಂಡರಾದ ರುದ್ರಗೌಡ, ಕೆ.ಶಿವು, ಆರ್.ಸಿದ್ದಪ್ಪ, ಎಂ.ನಾಗಪ್ಪ, ಟಿ.ಗುಡಿಯಪ್ಪ, ವೀರೇಶ ಚಲುವಾದಿ, ಎಸ್. ವೀರೇಶ, ಹನುಮಂತ ದಡ್ಡಿಹಾಳ, ಹುಸೇನಪ್ಪ ದಂಡಿನ್ ಇತರರು ಖಂಡಿಸಿದ್ದಾರೆ.