ಬಿಜೆಪಿ ಅಭ್ಯರ್ಥಿ ಕೋಟ್ಯಧಿಪತಿ
ರಾಯಚೂರು: ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೋಟ್ಯಧಿಪತಿ, ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಹಲವು ಕೇಸ್, ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಲಕ್ಷಾಧೀಶ ಸಹೋದರರ ಮಧ್ಯೆ ಹಣಾಹಣಿ.
ರಾಯಚೂರು ನಗರ ಮತ್ತು ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಪ್ರಮುಖರು ಘೋಷಿಸಿಕೊಂಡ ಆಸ್ತಿ ವಿವರಗಳಲ್ಲಿ ಕಂಡುಬಂದ ಮಾಹಿತಿಯಿದು.
38, 29, 829 ಬೆಲೆಯ ಚರಾಸ್ತಿ: ರಾಯಚೂರು ನಗರ ಕ್ಷೇತ್ರದ ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ ಪೂಜಾಗಾಂಧಿ 10ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದಾರೆ. ನಟನೆಯೇ ಅವರ ವೃತ್ತಿ. ಕೆಲ ಸಾಮಾನ್ಯ ಪ್ರಕರಣಗಳನ್ನು ನಟಿ ಪೂಜಾಗಾಂಧಿ ಅವರು ನ್ಯಾಯಾಲಯದಲ್ಲಿ ಎದುರಿಸುತ್ತಿದ್ದು, ಬೆಂಗಳೂರು ಸೇರಿ ನಾನಾ ಕಡೆಯ ಕೋರ್ಟ್ಗಳಲ್ಲಿ ವಿಚಾರಣೆ ಹಂತದಲ್ಲಿವೆ. ಮೀರತ್ನ ಕಂಟೋನ್ಮೆಂಟ್ ಪಬ್ಲಿಕ್ ಶಾಲೆಯಲ್ಲಿ 1999ರಲ್ಲಿ 10ನೇ ತರಗತಿ ಪಾಸಾಗಿದ್ದಾರೆ. ಇವರ ಹೆಸರಿನಲ್ಲಿ ಸ್ಥಿರಾಸ್ತಿ ಇಲ್ಲ. ನಗದು, ನಿಗದಿತ ಠೇವಣಿ ಸೇರಿ 38, 29, 829 ಬೆಲೆಯ ಚರಾಸ್ತಿಯಿದೆ. ನಾನಾ ಹಣಕಾಸು ಸಂಸ್ಥೆಗಳಲ್ಲಿ 12,76, 228 ಸಾಲವಿರುವುದನ್ನು ಅವರು ಹೇಳಿಕೊಂಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಕೋಟ್ಯಧಿಪತಿ: ರಾಯಚೂರು ನಗರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತ್ರಿವಿಕ್ರಮ್ ಜೋಶಿ ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಗುತ್ತಿಗೆದಾರ, ಕೃಷಿಕ ಜತೆಗೆ ಪತ್ರಕರ್ತರೂ ಹೌದು. ಇವರ ಪತ್ನಿ ಅಮೃತಾ ಜೋಶಿ ಅವರು ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ತ್ರಿವಿಕ್ರಮ ಜೋಶಿ ಅವರ ಹೆಸರಿನಲ್ಲಿರುವ ಚರಾಸ್ತಿ ಮೌಲ್ಯ 25,30,611 ಹಾಗೂ ಅವರ ಪತ್ನಿ ಹೆಸರಿನಲ್ಲಿ 22,83,550 ಸೇರಿ ಒಟ್ಟು 1,72,30,000 ಮೌಲ್ಯದ ಸ್ಥಿರಾಸ್ತಿಗೆ ಜೋಶಿ ಒಡೆಯರು. ಪತ್ನಿ ಹೆಸರಿನಲ್ಲಿ 58,83,550 ಬೆಲೆಯ ಸ್ಥಿರಾಸ್ತಿಯಿದೆ. ಯಾವುದೇ ಸಾಲವಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಲಕ್ಷಾಧೀಶ ಸಹೋದರರು: ರಾಯಚೂರು ಗ್ರಾಮೀಣ ವಿಧಾನಸಭೆ ಕ್ಷೇತ್ರದಲ್ಲಿ ಸಹೋದರರು ಪರಸ್ಪರ ಎದುರಾಳಿಗಳು. ಇಬ್ಬರೂ ಲಕ್ಷಾಧೀಶರು. ಕಾಂಗ್ರೆಸ್ನ ಅಭ್ಯರ್ಥಿ ಹಾಗೂ ಹಾಲಿ ಶಾಸಕ ರಾಜಾ ರಾಯಪ್ಪ ನಾಯಕ ಅವರು ತಮ್ಮ ಕಿರಿಯ ಸಹೋದರ, ಜೆಡಿಎಸ್ ಅಭ್ಯರ್ಥಿ ರಾಜಾ ಅಮರೇಶ್ ನಾಯಕ ವಿರುದ್ಧ ಸ್ಪರ್ಧಿಸಿದ್ದಾರೆ.
ಕಾಂಗ್ರೆಸ್ನ ರಾಜಾ ರಾಯಪ್ಪ ನಾಯಕ ಅವರ ವೃತ್ತಿ ವ್ಯವಸಾಯ. ಬಿಎ ಪದವೀಧರರು. ಇವರ ಪತ್ನಿ ಶಾರದಾ ಗೃಹಿಣಿ. ರಾಯಪ್ಪ ನಾಯಕ ಚರಾಸ್ತಿ ಮೌಲ್ಯ 11 ಲಕ್ಷ ಆಗಿದ್ದರೆ, 5ಲಕ್ಷ ಬೆಲೆಯ ಸ್ವಯಾರ್ಜಿತ ಸ್ಥಿರಾಸ್ತಿಯಿದೆ. ಹಾಗೆಯೇ ಅವರ ಬಳಿ 50 ಲಕ್ಷ ಬೆಲೆಯ ಪಿತ್ರಾರ್ಜಿತ ಆಸ್ತಿಯಿದೆ.
ಪತ್ನಿ ಹೆಸರಿನಲ್ಲಿ ಸ್ವಯಾರ್ಜಿತ 40 ಲಕ್ಷ ಬೆಲೆಯ ಸ್ಥಿರಾಸ್ತಿಯಿದೆ. ಪಿತ್ರಾರ್ಜಿತ ಆಸ್ತಿ 8 ಲಕ್ಷ ಇದೆ. ಯಾವುದೇ ಸಾಲ ಇವರು ಪಡೆದಿಲ್ಲ ಎಂದು ತಿಳಿಸಿದ್ದಾರೆ.
ಪತ್ನಿಯೇ ಸಿರಿವಂತೆ: ಮಾಜಿ ಮಂತ್ರಿ, ಜೆಡಿಎಸ್ ಅಭ್ಯರ್ಥಿ ರಾಜಾ ಅಮರೇಶ ನಾಯಕ ಅವರು ಸಲ್ಲಿಸಿದ ಆಸ್ತಿ ವಿವರದಲ್ಲಿ ತಮಗಿಂತ ತಮ್ಮ ಪತ್ನಿಯೇ ಸಿರಿವಂತೆ ಎಂದು ತಿಳಿಸಿದ್ದಾರೆ. ಬಿಎ, ಎಲ್ಲೆಲ್ಬಿ ಸ್ಪೆಷಲ್ ಪದವೀಧರರಾಗಿರುವ ಅಮರೇಶ್ ನಾಯಕರಿಗೆ ಒಕ್ಕಲುತನವೇ ವೃತ್ತಿ. ಪತ್ನಿ ಮೋಹನಾಂಬಾ ಗೃಹಿಣಿ.
ನಗದು ಸೇರಿ 32, 96,771 ಬೆಲೆಯ ಚರಾಸ್ತಿಯಿದ್ದು, 30, 25000 ಬೆಲೆಯ ಸ್ಥಿರಾಸ್ತಿಯಿದೆ. 5.067 ಲಕ್ಷ ಸಾಲವಿದೆ. ಪತ್ನಿ ಹೆಸರಿನಲ್ಲಿ 14,33,578 ಬೆಲೆಯ ಚರಾಸ್ತಿ, 1.11ಕೋಟಿ ಸ್ಥಿರಾಸ್ತಿಯಿದೆ. ಅದೇ ರೀತಿ 5,33,283 ಸಾಲವಿದೆ ಎಂದು ಆಸ್ತಿ ವಿವರದಲ್ಲಿ ತಿಳಿಸಿದ್ದಾರೆ.