ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಉತ್ತಮ ನಾಯಕರ ಆಯ್ಕೆಗೆ ಇದು ಸಕಾಲ

Lingaraj Badiger
Updated On : 18 Apr 2013, 11:02 am

ಕನ್ನಡಪ್ರಭ ವಾರ್ತೆ, ರಾಯಚೂರು, ಏ.17
ಬಿಜೆಪಿ ಮುಳುಗುತ್ತಿರುವ ಹಡಗು ಇದ್ದಂತೆ, ಮತದಾರರು ಎಚ್ಚರಿಕೆಯಿಂದ ಮತ ಚಲಾಯಿಸುವ ಅವಶ್ಯಕತೆಯಿದೆ. ಒಳ್ಳೆಯ ನಾಯಕರನ್ನು ಆಯ್ಕೆ ಮಾಡಿಕೊಳ್ಳಲು ಇದು ಸಕಾಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಲಹೆ ನೀಡಿದರು.
ನಗರದ ಮಹಿಳಾ ಸಮಾಜದಲ್ಲಿ ಬುಧವಾರ ಸಂಜೆ ಕೆಜೆಪಿ ಆಯೋಜಿಸಿದ್ದ ನಗರ ಕ್ಷೇತ್ರದ ಕಾರ್ಯಕರ್ತರ ಸಮಾವೇಶ ಹಾಗೂ ಪ್ರಚಾರ ಸಭೆಯಲ್ಲಿ ಮಾತನಾಡಿ, ಮತದಾನದ ವೇಳೆ ಮತದಾರರು ಎಚ್ಚರಿಕೆಯಿಂದಿರಬೇಕಿದೆ. ಯಡಿಯೂರಪ್ಪ ಬಿಜೆಪಿಯಲ್ಲಿಲ್ಲ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಳ್ಳುವಂತೆ ಸಲಹೆ ನೀಡಿದ ಅವರು, ತಾವು ರಾಜ್ಯದ ಸಿಎಂ ಆಗಲು ಕೆಜೆಪಿ ಪಕ್ಷ ಸ್ಥಾಪಿಸಿಲ್ಲ. ರಾಜ್ಯದ ಅಭಿವೃದ್ಧಿ ಮಾತ್ರ ಗುರಿ ಎಂದು ಹೇಳಿದರು.
ಎಲ್ಲರ ಹಿತಕ್ಕಾಗಿ..: ರಾಜ್ಯದಲ್ಲಿ ತಾವು 27ನೇ ಸಿಎಂ ಆಗಿ ಕಾರ್ಯನಿರ್ವಹಿಸಿದ್ದು ತಮ್ಮ ಅಧಿಕಾರವಧಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಜಾರಿಗೆ ಬಂದಿವೆ. ಎಸ್ಸಿ- ಎಸ್ಟಿ ಸೇರಿದಂತೆ ಸಮಾಜದ ಎಲ್ಲ ಜಾತಿ- ಜನಾಂಗದವರ ಹಿತ ಕಾಯಲು ತಾವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾಗಿ ಅವರು ಹೇಳಿದರು.
ರಾಯಚೂರು ನಗರ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳು ತಮ್ಮ ಅವಧಿಯಲ್ಲಿಯೇ ಜಾರಿಗೆ ಬಂದಿದ್ದು, ಕೋಟ್ಯಂತರ ರು. ವೆಚ್ಚ ಮಾಡಿದ್ದಾಗಿ ತಿಳಿಸಿದ ಅವರು, ಮಾವಿನ ಕೆರೆ ಅಭಿವೃದ್ಧಿ, ಚತುಷ್ಪಥ ರಸ್ತೆ ನಿರ್ಮಾಣ, ಕೃಷಿ ವಿವಿ ಸ್ಥಾಪನೆ, ಸರ್ಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ತಮ್ಮ ಪ್ರಯತ್ನವೇ ಕಾರಣ ಎಂದು ಹೇಳಿದರು.
ಕೇಂದ್ರ ಮೇಲೆ ಹಿಡಿತ ಸಾಧಿಸುವ ಉದ್ದೇಶ: ಪ್ರಾದೇಶಿಕ ಪಕ್ಷ ಸ್ಥಾಪಿಸುವ ಮೂಲಕ ರಾಜ್ಯದ ನೆಲ- ಜಲ, ಭಾಷೆ ರಕ್ಷಣೆಯ ಕಾರ್ಯ ಮಾಡಲಾಗುತ್ತದೆ. ಕೇಂದ್ರದಲ್ಲಿ ಮುಂದಿನ ದಿನಗಳಲ್ಲಿ 20ಕ್ಕೂ ಹೆಚ್ಚಿನ ಸಂಸದರನ್ನು ಕೆಜೆಪಿ ಹೊಂದುವ ಮೂಲಕ ಕೇಂದ್ರ ಸರ್ಕಾರದ ಮೇಲೆ ಹಿಡಿತ ಸಾಧಿಸುವ ಉದ್ದೇಶವಿದೆ. ಆ ಮೂಲಕ ರಾಜ್ಯದ ಜನರ ಆಶಯಗಳನ್ನು ಈಡೇರಿಸುವ ಕಾರ್ಯ ಮಾಡುವುದಾಗಿ ಅವರು ಹೇಳಿದರು.
ಭೋವಿ, ಬಂಜಾರಾ, ದಲಿತರ ಏಳಿಗೆಗೆ ತಾವು ಅನೇಕ ಕಾರ್ಯಕ್ರಮ ಜಾರಿಗೆ ತಂದಿದ್ದು, ವಿವಿಧ ಇಲಾಖೆಗಳಲ್ಲಿ ಶೇ. 22.75ರ ಅನುದಾನ ಮೀಸಲಿಡಲು ಸೂಚಿಸಿದ್ದು, ಅದರ ಬಳಕೆಯಲ್ಲಿ ಸ್ಥಳೀಯವಾಗಿ ವಿಫಲವಾಗಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕೆಜೆಪಿ ಅಧಿಕಾರಕ್ಕೆ ಬಂದಲ್ಲಿ ಶೇ.22.75 ಅನುದಾನ ಬಳಕೆಗೆ ಹೆಚ್ಚಿನ ಒತ್ತು ನೀಡುವುದಾಗಿ ಅವರು ಭರವಸೆ ನೀಡಿದರು.
ಸಭೆಯಲ್ಲಿ ಕೆಜೆಪಿ ನಗರ ಕ್ಷೇತ್ರದ ಅಭ್ಯರ್ಥಿ ಬಸವರಾಜ ಕಳಸ, ಜಿಲ್ಲಾಧ್ಯಕ್ಷ ವೆಂಕನಗೌಡ ಮಲ್ಕಾಪುರ, ಹರವಿ ಶಂಕರಗೌಡ, ಶಶಿರಾಜ್ ಮಸ್ಕಿ, ಪವನ್ ಪಾಟೀಲ್ ಸೇರಿದಂತೆ ಅನೇಕರು ಇದ್ದರು. ಕೆಜೆಪಿ ಕಾರ್ಯಕರ್ತರು ಹಾಗೂ ಜನತೆ ಸಭೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement