'ಕೈ' ಬಂಡಾಯ ಶಮನಕ್ಕೆ ಸಿದ್ದರಾಮಯ್ಯ ಅಸ್ತ್ರ
ರಾಯಚೂರು: ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳಂತೆ ಕಾಂಗ್ರೆಸ್ನಲ್ಲಿಯೂ ಟಿಕೆಟ್ ಹಂಚಿಕೆಯ ಅಸಮಾಧಾನ ಭುಗಿಲೆದ್ದಿದೆ. ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧವೇ ರಾಯಚೂರು ನಗರ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿ ನಾಮಪತ್ರ ಸಲ್ಲಿಸಿರುವುದು ಅಧಿಕೃತ ಅಭ್ಯರ್ಥಿಗೆ ಸಂಕಷ್ಟ ತಂದಿತ್ತು. ಸದ್ಯ ಬಂಡಾಯ ಅಭ್ಯರ್ಥಿಯ ಮನವೊಲಿಕೆ ಕಾರ್ಯಕ್ಕೆ ಪಕ್ಷ ಚಾಲನೆ ನೀಡಿದೆ.
ರಾಯಚೂರು ನಗರ ಕ್ಷೇತ್ರವು ಸಾಮಾನ್ಯರಿಗೆ ಮೀಸಲಾಗಿದ್ದು, ಹಾಲಿ ಕಾಂಗ್ರೆಸ್ ಶಾಸಕ ಸೈಯದ್ ಯಾಸೀನ್ ಅವರಿಗೆ ಕಾಂಗ್ರೆಸ್ ಮಣೆ ಹಾಕಿದ್ದು ಆ ಪಕ್ಷದಲ್ಲಿನ ಒಂದು ಗುಂಪಿಗೆ ಬೇಸರಕ್ಕೆ ಕಾರಣವಾಗಿತ್ತು. ಆ ಹಿನ್ನೆಲೆಯಲ್ಲಿ ಜಿಪಂ ಮಾಜಿ ಸದಸ್ಯ ಬಷೀರುದ್ದೀನ್ ತೀವ್ರ ಅಸಮಾಧಾನಗೊಂಡಿದ್ದರು.
ಭಿನ್ನಮತ ಶಮನಕ್ಕೆ ಚಾಲನೆ: ಪಕ್ಷದ ಟಿಕೆಟ್ ಹಂಚಿಕೆಯಲ್ಲಿನ ಅಸಮಾಧಾನದಿಂದ ಬಷೀರುದ್ದೀನ್ ಅವರು ನಾಮಪತ್ರ ಸಲ್ಲಿಸುವ ಮೂಲಕ ಅಧಿಕೃತ ಅಭ್ಯರ್ಥಿ ಸೈಯದ್ ಯಾಸೀನ್ ವಿರುದ್ಧ ಸಡ್ಡು ಹೊಡೆದಿದ್ದರು. ಅದರಿಂದ ಜಿಲ್ಲಾ ಕಾಂಗ್ರೆಸ್ನಲ್ಲಿ ಟಿಕೆಟ್ ಹಂಚಿಕೆ ಅತೃಪ್ತಿ ಭುಗಿಲೆದ್ದಿತ್ತು.
ಅಧಿಕೃತ ಅಭ್ಯರ್ಥಿ ವಿರುದ್ಧವೇ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಪಕ್ಷದ ಜಿಲ್ಲಾ ಮುಖಂಡರಲ್ಲಿ ಆತಂಕ ತಂದಿತ್ತು. ಪರಿಣಾಮ ಕೆಪಿಸಿಸಿ ಗಮನಕ್ಕೆ ಈ ವಿಚಾರವನ್ನು ತರಲಾಗಿದ್ದು, ಸದ್ಯ ಭಿನ್ನಮತ ಶಮನಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಲಾಗಿದೆ.
ಸಿದ್ದರಾಮಯ್ಯರಿಂದ ಮನವೊಲಿಕೆ: ಈಗಾಗಲೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೂಲಕ ಬಂಡಾಯ ಅಭ್ಯರ್ಥಿ ಬಷೀರುದ್ದೀನ್ ಮನವೊಲಿಕೆಗೆ ತಂತ್ರ ರೂಪಿಸಲಾಗಿದೆ ಎಂದು ಗೊತ್ತಾಗಿದ್ದು, ಈಗಾಗಲೇ ಸಿದ್ದರಾಮಯ್ಯ ಅವರು ಬಷೀರುದ್ದೀನ್ ಅವರನ್ನು ಒಂದು ಬಾರಿ ಸಂಪರ್ಕಿಸಿ ದೂರವಾಣಿಯಲ್ಲಿ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ಏ.18ರಂದು ಜಿಲ್ಲೆಗೆ ಸಿದ್ದರಾಮಯ್ಯ ಅವರು ದೇವದುರ್ಗ ಕ್ಷೇತ್ರದಲ್ಲಿ ಪ್ರಚಾರಕ್ಕೆ ಆಗಮಿಸುವ ಸಾಧ್ಯತೆಯಿದ್ದು, ಆ ಸಂದರ್ಭದಲ್ಲಿ ಖುದ್ದಾಗಿ ಬಂಡಾಯ ಅಭ್ಯರ್ಥಿ ಬಷೀರುದ್ದೀನ್ ಅವರನ್ನು ಭೇಟಿ ಮಾಡಿ ಮನವೊಲಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಗಿದೆ ಎಂದು ಗೊತ್ತಾಗಿದೆ.
ಕಳೆದ ವಿಧಾನಸಭೆ ಚುನಾವಣೆ ವೇಳೆ ಜಿಪಂ ಮಾಜಿ ಸದಸ್ಯ ಬಷೀರುದ್ದೀನ್ ಅವರು ಕಣಕ್ಕಿಳಿಯಲು ಆಸಕ್ತಿ ತೋರಿದ್ದರು. ಆಗ ಜಿಲ್ಲೆಯ ಹಿರಿಯ ನಾಯಕರು ಹೈ.ಕ. ಭಾಗದ ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮೂಲಕ ಕಣದಿಂದ ಬಷೀರುದ್ದೀನ್ ಅವರನ್ನು ಹಿಂದೆ ಸರಿಸುವಲ್ಲಿ ಯಶಸ್ವಿಯಾಗಿದ್ದರು.
ಏ.20ರೊಳಗೆ ನಿರ್ಧಾರ: ಆಗ ಮುಂದಿನ ದಿನಗಳಲ್ಲಿ ಸೂಕ್ತ ಪ್ರಾಮುಖ್ಯತೆಯ ಭರವಸೆಯನ್ನು ಕಾಂಗ್ರೆಸ್ ನಾಯಕರು ನೀಡಿದ್ದರು. ಆದರೆ ತಮ್ಮನ್ನು ನಿರ್ಲಕ್ಷಿಸಿದ್ದರಿಂದಲೇ ಪ್ರಸಕ್ತ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಿರುವುದಾಗಿ ಬಷೀರುದ್ದೀನ್ ಈಗಾಗಲೇ ಹೇಳಿಕೊಂಡಿದ್ದು ಸದ್ಯ ಪಕ್ಷದಲ್ಲಿನ ಅತೃಪ್ತಿ ಶಮನಗೊಳಿಸುವ ಕಾರ್ಯ ಚುರುಕುಗೊಳಿಸಲಾಗಿದೆ.
ಈ ಕುರಿತು 'ಕನ್ನಡಪ್ರಭ'ಕ್ಕೆ ಮಾತನಾಡಿದ ಜಿಪಂ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಬಷೀರುದ್ದೀನ್, ಪಕ್ಷದ ಹಿರಿಯ ನಾಯಕ ಸಿದ್ದರಾಮಯ್ಯ ಅವರು ತಮ್ಮನ್ನು ಸಂಪರ್ಕಿಸಿದ್ದು ನಿಜ. ಆದರೆ ಕಣದಿಂದ ಹಿಂದೆ ಸರಿಯುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಏ.20ರ ವೇಳೆಗೆ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ಒಂದೆಡೆ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಸೈಯದ್ ಯಾಸೀನ್ ಅವರಿಗೆ ಅವರದ್ದೇ ಪಕ್ಷದ ಬಂಡಾಯದ ಭೀತಿ ಯಾದರೆ, ಅದೇ ವೇಳೆ ಇನ್ನೊಂದೆಡೆ ಅವರದ್ದೇ ಕೋಮಿನ ಅನೇಕರು ಪಕ್ಷೇತರರಾಗಿ ಹಾಗೂ ವಿವಿಧ ಪಕ್ಷಗಳಿಂದ ಕಣಕ್ಕಿಳಿದಿರುವುದು ಮುಸ್ಲಿಂ ಮತಗಳನ್ನು ಸೆಳೆಯುವಲ್ಲಿ ತೀವ್ರ ಪೈಪೋಟಿಗೆ ಎಡೆ ಮಾಡಿರುವುದಂತೂ ನಿಜ.