ನಾಮಪತ್ರದ ಕೊನೆ ಅಬ್ಬರ
ಕನ್ನಡಪ್ರಭ ವಾರ್ತೆ, ರಾಯಚೂರು, ಏ.17
ಜಿಲ್ಲಾದ್ಯಂತ ಮೇ.5ರಂದು ನಡೆಯುವ ಚುನಾವಣೆಗೆ ನಾಮಪತ್ರಗಳ ಸಲ್ಲಿಕೆ ಕಡೆಯ ದಿನವಾದ ಬುಧವಾರ ಜೆಡಿಎಸ್ ಮತ್ತು ಕೆಜೆಪಿ ಸೇರಿದಂತೆ ಅನೇಕರು ನಾಮಪತ್ರ ಸಲ್ಲಿಸಿದರು.
ರಾಯಚೂರು ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ. ಶಿವರಾಜ್ ಪಾಟೀಲ್ ಅವರು ನಗರದ ಶಶಿಮಹಲ್ ವೃತ್ತದಿಂದ ತಮ್ಮ ಅಪಾರ ಬೆಂಬಲಿಗರೊಂದಿಗೆ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿ ಸಹಾಯಕ ಆಯುಕ್ತೆ ಹಾಗೂ ಚುನಾವಣಾಧಿಕಾರಿ ಮಂಜುಶ್ರೀ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
ನಾಮಪತ್ರಗಳ ಭರಾಟೆ: ಜೆಡಿಎಸ್ ಜಿಲ್ಲಾಧ್ಯಕ್ಷ ಮಹಾಂತೇಶ್ ಪಾಟೀಲ್ ಅತ್ತನೂರು, ಆಂಜಿನೇಯ್ಯ, ಯುಸೂಫ್ ಖಾನ್, ಶಿವಶಂಕರ್, ಪವನ್ ಕುಮಾರ್ ಸೇರಿದಂತೆ ಅನೇಕರಿದ್ದರು.
ಅದೇ ರೀತಿ ನಗರ ಕ್ಷೇತ್ರಕ್ಕೆ ಕೆಜೆಪಿ ಅಭ್ಯರ್ಥಿ ಬಸವರಾಜ ಕಳಸ ಅವರು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೆಜೆಪಿ ಪ್ರಮುಖರಾದ ಶಶಿರಾಜ್ ಮಸ್ಕಿ, ಪವನ್ ಪಾಟೀಲ್ ಸೇರಿ ಅನೇಕರಿದ್ದರು.
ನಗರ ಶಾಸಕ ಸೈಯದ್ ಯಾಸೀನ್ ಕಾಂಗ್ರೆಸ್ ಅಭ್ಯರ್ಥಿಯಾಗಿ ನಗರ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದು ಬುಧವಾರ ಪುನಃ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ್, ಮಾಜಿ ಶಾಸಕ ಪಾಪಾರೆಡ್ಡಿ, ಬಸವರಾಜ ರೆಡ್ಡಿ, ಪಾರಸಮಲ್ ಸುಖಾಣಿ ಮತ್ತಿತರರು ಇದ್ದರು.
ರಾಯಚೂರು ಗ್ರಾಮೀಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಾಜಾಅಮರೇಶ್ ನಾಯಕ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಸಾಗಿ ತಹಸೀಲ್ದಾರ್ ಕಚೇರಿಯಲ್ಲಿ ಚುನಾವಣಾಧಿಕಾರಿ ಎಂ.ಡಿ. ಯುಸೂಫ್ ಅವರಿಗೆ ನಾಮಪತ್ರ ಸಲ್ಲಿಸಿದರು. ಅವರೊಂದಿಗೆ ಬಾಬುದಿನ್ನಿ ಮತ್ತಿತರರು ಇದ್ದರು.
ಬಿಗಿ ಭದ್ರತೆ: ಅದೇ ರೀತಿ ಕೆಜೆಪಿ ಅಭ್ಯರ್ಥಿ ಮಲ್ಲೇಶ ನಾಯಕ ಅವರೂ ಸಹ ಗ್ರಾಮೀಣ ಕ್ಷೇತ್ರದಲ್ಲಿ ತಮ್ಮ ನಾಮಪತ್ರ ಸಲ್ಲಿಸಿದರು. ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಾರಾಯಪ್ಪ ನಾಯಕ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು.
ನಗರ ಸೇರಿದಂತೆ ಜಿಲ್ಲಾದ್ಯಂತ ಬುಧವಾರ ನಾಮಪತ್ರಗಳ ಸಲ್ಲಿಕೆ ಕಾರ್ಯ ಭರದಿಂದ ಸಾಗಿತು. ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದ್ದರಿಂದ ಎಲ್ಲ ಅಭ್ಯರ್ಥಿಗಳು ತರಾತುರಿಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು. ರಾಯಚೂರು ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯ ಹೆಸರು ಘೋಷಣೆ ವಿಳಂಬವಾಗಿ ಬುಧವಾರ ಬೆಳಗ್ಗೆಯೇ ಅಂತಿಮವಾಗಿದ್ದರಿಂದ ಅಭ್ಯರ್ಥಿ ಡಾ. ಶಿವರಾಜ್ ಪಾಟೀಲ್ ಬೆಂಬಲಿಗರೊಂದಿಗೆ ಧಾವಿಸಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ವೇಳೆ ಪೊಲೀಸ್ ಮತ್ತು ಕೇಂದ್ರ ಮೀಸಲು ಪಡೆಯ ಬಿಗಿ ಕಾವಲು ಹಾಕಲಾಗಿತ್ತು.
94 ನಾಮಪತ್ರ ಸಲ್ಲಿಕೆ
ರಾಯಚೂರು: ಜಿಲ್ಲೆಯಲ್ಲಿ ಮೇ 5ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯ ಹಿನ್ನೆಲೆ ಬುಧವಾರ ಒಟ್ಟು 94 ನಾಮಪತ್ರಗಳು ಸಲ್ಲಿಕೆಯಾಗಿವೆ.
ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಬುಧವಾರ ರಾಯಚೂರು ಗ್ರಾಮೀಣ ವಿಧಾನಸಭೆ ಕ್ಷೇತ್ರದಲ್ಲಿ 14, ರಾಯಚೂರು ನಗರ ವಿಧಾನಸಭೆ ಕ್ಷೇತ್ರದಲ್ಲಿ 24, ಮಾನವಿಯಲ್ಲಿ 11, ದೇವದುರ್ಗದಲ್ಲಿ 8, ಲಿಂಗಸ್ಗೂರಿನಲ್ಲಿ 13, ಸಿಂಧನೂರಿನಲ್ಲಿ 14 ಹಾಗೂ ಮಸ್ಕಿ ಕ್ಷೇತ್ರಕ್ಕೆ 10 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಚುನಾವಣೆ ವಿಭಾಗ ತಿಳಿಸಿದೆ.