ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಿಜೆಪಿಗೆ ಪಾಠ ಕಲಿಸಲು ಕೆಜೆಪಿ ಅಧಿಕಾರಕ್ಕೆ ತನ್ನಿ: ಬಿಎಸ್‌ವೈ

Lingaraj Badiger
Updated On : 18 Apr 2013, 11:02 am

ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಏ.17
ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನನ್ನ ಬೆನ್ನಿಗೆ ಚೂರಿ ಹಾಕಿದ ಮತ್ತು ಅಪರಾಧಿ ಎಂದು ಹೇಳುವ ಬಿಜೆಪಿ ಪಕ್ಷದವರಿಗೆ ಪಾಠ ಕಲಿಸಲು ಕೆಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಮಾಜಿ ಮುಖ್ಯಮಂತ್ರಿ, ಕೆಜೆಪಿ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕರೆ ನೀಡಿದರು.
ಪಟ್ಟಣದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕೆಜೆಪಿಯಿಂದ ಬುಧವಾರ ಹಮ್ಮಿಕೊಂಡಿದ್ದ ಚುನಾವಣಾ ಬಹಿರಂಗ ಸಭೆಯಲ್ಲಿ ತೆಂಗಿನಕಾಯಿ ಒಡೆದು, ಸಸಿಗೆ ನೀರೆರೆದು ಮಾತನಾಡಿದ ಅವರು, ಈ ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರ್ಥಿಕ ಮಂತ್ರಿಯಾಗಿದ್ದ ಸಿದ್ದರಾಮಯ್ಯ 7 ಬಾರಿ 36 ಸಾವಿರ ಕೋಟಿ ಬಜೆಟ್ ಮಂಡಿಸಿದ್ದಾರೆ. ಆದರೆ ನಾನು 6 ಬಾರಿ 86 ಸಾವಿರ ಕೋಟಿ ಬಜೆಟ್ ಮಂಡಿಸುವ ಜೊತೆಗೆ 56 ಸಾವಿರ ಕೋಟಿ ಆದಾಯ ಬರುವಂತೆ ನೋಡಿಕೊಂಡ ನನ್ನನ್ನು ಅಪರಾಧಿ ಎಂದು ಕರೆದು ನೋಟು ಎಣಿಸುವ ಯಂತ್ರ ಇಟ್ಟುಕೊಂಡಿದ್ದ ಈಶ್ವರಪ್ಪ ಸಾಚಾ ಆಗಿದ್ದಾರೆ ಎಂದು ಟೀಕಿಸಿದರು.
ರಾಜ್ಯದ ಅಭಿವೃದ್ಧಿಗಾಗಿ ಕೆಜೆಪಿ ಬೆಂಬಲಿಸಿ: ರಾಜ್ಯದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಅಧಿಕಾರಕ್ಕೆ ತರುವ ಮೂಲಕ 27ನೇ ಮುಖ್ಯಮಂತ್ರಿಯಾಗಿ ಸರ್ವರಿಗೂ ಸಮಪಾಲು, ಸಮಬಾಳು ಮತ್ತು ಸಾಮಾಜಿಕ ನ್ಯಾಯ ದೊರಕಿಸಿಕೊಡುವಲ್ಲಿ ಶ್ರಮಿಸಿದ್ದೇನೆ. ಕೃಷಿಕರಿಗೆ, ರೈತರಿಗೆ ಪ್ರತ್ಯೇಕ ಕೃಷಿ ಬಜೆಟ್, ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, ಶಾಲಾ ಮಕ್ಕಳಿಗೆ ಸೈಕಲ್, 108 ಚಿಕಿತ್ಸಾ ವಾಹನ ಹೀಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇನೆ.
ಅಲ್ಲದೆ ಜನಪದ ಸೇರಿ 7 ವಿಶ್ವವಿದ್ಯಾಲಯಗಳ ಸ್ಥಾಪನೆ ಸೇರಿದಂತೆ ಎಲ್ಲ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯದ ಅಭಿವೃದ್ಧಿಗೆ ಗಮನ ಹರಿಸಿದ್ದೆ. ಇನ್ನು ರಾಜ್ಯದಲ್ಲಿ ಅಭಿವೃದ್ಧಿಯಾಗಬೇಕಿದ್ದರೆ ಕೆಜೆಪಿ ಅಧಿಕಾರಕ್ಕೆ ತರುವತ್ತ ಗಮನ ಹರಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಪ್ರತಿ ಮತವೂ ನಿರ್ಣಾಯಕ ಪಾತ್ರ: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆ ಸಂದರ್ಭದಲ್ಲಿ ಮತದಾರನ ಒಂದು ಮತವೂ ಅತ್ಯಂತ ನಿರ್ಣಾಯಕ ಪಾತ್ರ ವಹಿಸಲಿದ್ದು, ಚುನಾವಣೆ ಸಂದರ್ಭದಲ್ಲಿ ಹಣ, ಮದ್ಯದಂತಹ ಆಮಿಷ ಹಾಗೂ ಜಾತಿಯ ವಿಷ ಬೀಜ ಬಿತ್ತುವ ಅಭ್ಯರ್ಥಿಗಳಿಗೆ ಮತ ನೀಡದೆ ಅಭಿವೃದ್ಧಿಪರ ಚಿಂತನೆಯುಳ್ಳ ಹಾಗೂ ಪ್ರಾಮಾಣಿಕವಾಗಿ ಜನ ಸೇವೆ ಮಾಡುವ ಅಭ್ಯರ್ಥಿಗೆ ಮತ ನೀಡಬೇಕು. ಯಡಿಯೂರಪ್ಪನವರ ಕೈ ಬಲಪಡಿಸಲು ಕೆಜೆಪಿ ಅಭ್ಯರ್ಥಿಗಳಿಗೆ ಮತ ನೀಡಬೇಕೆಂದು ಮನವಿ ಮಾಡಿದರು.
ಬಹಿರಂಗ ಸಭೆಯಲ್ಲಿ ಕೆಜೆಪಿ ಜಿಲ್ಲಾಧ್ಯಕ್ಷ ವೆಂಕನಗೌಡ ಮಲ್ಕಾಪುರ, ಜಿಲ್ಲಾ ಉಸ್ತುವಾರಿ ಸಂಗಣ್ಣ ಹಿಜೇರಿ, ಲಿಂಗಸ್ಗೂರು ಅಭ್ಯರ್ಥಿ ಎಚ್.ಬಿ. ಮುರಾರಿ, ಮಸ್ಕಿ ಅಭ್ಯರ್ಥಿ ಮಹಾದೇವಪ್ಪಗೌಡ, ಮುಖಂಡರಾದ ಹನುಮಂತಪ್ಪ ತೊಗರಿ, ರಮೇಶ ಶಾಸ್ತ್ರಿ, ಎಕ್ಬಾಲ್ ಹವಾಲ್ದಾರ, ದೊಡ್ಡಬಸಪ್ಪ ಅಂಗಡಿ, ಶರಣಗೌಡ ಬಸಾಪೂರ, ಸಿ.ಸಿ. ಕರಡಕಲ್, ಜೆ.ಬಾಬು ಹಟ್ಟಿ, ಗುಂಡೂರಾವ್ ದೇಸಾಯಿ, ಮಹಾಂತೇಶ ಅನ್ವರಿ, ರತ್ನಾ ಹಟ್ಟಿ, ಶರಣಪ್ಪಗೌಡ ಸೇರಿದಂತೆ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement