ಯಾದವ ಸಮಾಜಕ್ಕೆ ಟಿಕೆಟ್ ನಿರಾಕರಣೆ; 'ಕೈ' ವಿರೋಧಕ್ಕೆ ನಿರ್ಧಾರ
ರಾಯಚೂರು: ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಯಾದವ ಸಮಾಜದ ಮುಖಂಡ ಎ. ಕೃಷ್ಣಪ್ಪಗೆ ಟಿಕೆಟ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ಯಾದವ ಸಮಾಜದವರು ಕಾಂಗ್ರೆಸ್‌ಗೆ ಮತ ನೀಡದಂತೆ ಯಾದವ ಸಮಾಜದ ಯುವ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಂಬುನಾಥ ಯಾದವ್ ಕರೆ ನೀಡಿದರು.
ಅವರು ನಗರದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಸಚಿವ ಎ. ಕೃಷ್ಣಪ್ಪ ಅವರು ಕಳೆದ ಅನೇಕ ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದು ಐದು ಬಾರಿ ಶಾಸಕರಾಗಿ ಹಾಗೂ ಒಂದು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಪಕ್ಷ ನಿಷ್ಠರಾಗಿದ್ದರೂ ಅವರಿಗೆ ಪ್ರಸಕ್ತ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲಾಗಿದೆ ಎಂದು ಟೀಕಿಸಿದರು.
'ಕುರುಬ' ರಾಜಕಾರಣ: ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಅವರು ಕೃಷ್ಣಪ್ಪ ಅವರಿಗೆ ಟಿಕೆಟ್ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಬಹುದಿತ್ತು. ಆದರೆ ಅವರು ಕೇವಲ ಕುರುಬ ಸಮಾಜವರ ಹಿತಕಾಯುವ ಕಾರ್ಯ ಮಾಡಿದ್ದಾರೆ. ಹಿಂದುಳಿದ ವರ್ಗಗಳ ನಾಯಕರಾಗಬಹುದಾಗಿದ್ದ ಸಿದ್ದರಾಮಯ್ಯ ಅವರು ಕೇವಲ ಕುರುಬ ಸಮಾಜದ ಪರ ಒಲವು ತೋರಿದ್ದು ಸರಿಯಲ್ಲ ಎಂದು ಅವರು ಆರೋಪಿಸಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೇವಲ ಒಂದು ಜಾತಿಗೆ ತಮ್ಮನ್ನು ಸೀಮಿತಗೊಳಿಸಿಕೊಳ್ಳುವುದು ಸರಿಯಲ್ಲ. ಅವರು ಎಲ್ಲ ಹಿಂದುಳಿದ ವರ್ಗಗಳ ನಾಯಕರಾಗಿದ್ದಾರೆ. ಅವರು ಕೇವಲ ಕುರುಬ ಸಮಾಜದವರ ಬೆಂಬಲಕ್ಕೆ ನಿಲ್ಲದೇ ಹಿಂದುಳಿದ ವರ್ಗಗಳ ಎಲ್ಲ ಕೋಮಿನವರಿಗೆ ಟಿಕೆಟ್ ದೊರಕಿಸಿಕೊಡುವ ಕಾರ್ಯ ಮಾಡಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೋರಾಟದ ಎಚ್ಚರಿಕೆ: ಸದ್ಯ ಕೆ.ಆರ್. ಪುರಂನಿಂದ ಟಿಕೆಟ್ ಕೈ ತಪ್ಪಿದ್ದರಿಂದ ಎ. ಕೃಷ್ಣಪ್ಪ ಅವರು ಜೆಡಿಎಸ್ ಸೇರಿದ್ದಾರೆ. ಆದರೆ ಕಾಂಗ್ರೆಸ್‌ನಿಂದಾಗಿರುವ ಅನ್ಯಾಯವನ್ನು ಯಾದವ ಸಮಾಜ ಮರೆಯಲಾರದು. ಈ ಹಿನ್ನೆಲೆಯಲ್ಲಿ ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡದಂತೆ ಯಾದವ ಸಮಾಜದವರಿಗೆ ಮನವಿ ಮಾಡುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಯಾದವ ಸಮಾಜದವರು ಕಡಿಮೆ ಸಂಖ್ಯೆಯಲ್ಲಿರುವುದರಿಂದ ಟಿಕೆಟ್ ನಿರಾಕರಿಸುವ ಕಾರ್ಯ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ತಂತ್ರವನ್ನು ಕಾಂಗ್ರೆಸ್ ಮುಂದುವರಿಸಿದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದ ಅವರು, ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಯಾದವ ಸಮಾಜದ ಎಲ್ಲ ಮತದಾರರು ಸಮಾಜಕ್ಕೆ ಕಾಂಗ್ರೆಸ್ ಮಾಡಿದ ಅನ್ಯಾಯವನ್ನು ತೀಕ್ಷ್ಣವಾಗಿ ಪರಿಗಣಿಸಿ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸುವಂತೆ ಮನವಿ ಮಾಡಿದರು.