ಅಭ್ಯರ್ಥಿ ಪರ ದೇಣಿಗೆ ಸಂಗ್ರಹ!
ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಏ.18
ತಾಲೂಕಿನ ದಲಿತ ಮತ್ತು ಛಲವಾದಿ ಸಮಾಜದ ಮುಖಂಡರು ಗುರುವಾರ ಸಭೆ ಸೇರಿ ಸ್ವಯಂ ಪ್ರೇರಿತರಾಗಿ ದೇಣಿಗೆ ಸಂಗ್ರಹಿಸಿ ಲಿಂಗಸ್ಗೂರು ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಎಚ್.ಬಿ. ಮುರಾರಿ ಅವರಿಗೆ ನೀಡಿದರು.
ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು ಮತದಾರರ ಓಲೈಕೆಗೆ ಹಣ, ಹೆಂಡ ಸೇರಿದಂತೆ ಇನ್ನಿತರೆ ಆಮಿಷ ತೋರಿಸುವ ಪ್ರಸಂಗಗಳು ನಡೆಯುತ್ತಿವೆ. ಆದರೆ ಇದಕ್ಕೆ ವಿರೋಧವೆಂಬಂತೆ ದಲಿತ ಸಮುದಾಯದ ಕೆಜೆಪಿ ಅಭ್ಯರ್ಥಿ ಎಚ್.ಬಿ. ಮುರಾರಿ ಅವರಿಗೆ ಚುನಾವಣೆಗೆ ಸಹಾಯವಾಗಲೆಂದು ಸಮಾಜದ ಮುಖಂಡರು ಸ್ವಯಂ ಪ್ರೇರಿತರಾಗಿ ದೇಣಿಗೆ ಸಂಗ್ರಹಿಸಿ ನೀಡಿರುವುದು ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ.
ಹಿರಿಯರ ಸಹಕಾರದಿಂದ ಸ್ಪರ್ಧೆಗೆ ಅವಕಾಶ: ದೇಣಿಗೆ ಸ್ವೀಕರಿಸಿ ಮಾತನಾಡಿದ ಅಭ್ಯರ್ಥಿ ಎಚ್.ಬಿ. ಮುರಾರಿ, ಪ್ರಸಕ್ತ ವಿಧಾನಸಭೆ ಚುನಾವಣೆಗೆ ಲಿಂಗಸ್ಗೂರು ಕ್ಷೇತ್ರದಿಂದ ಸ್ಪರ್ಧಿಸಿದ ಅಭ್ಯರ್ಥಿಗಳು ಕೋಟಿ ರು.ಗಳ ಒಡೆಯರಾಗಿದ್ದು, ಇಂಥವರ ಜೊತೆ ಸ್ಪರ್ಧೆಗಿಳಿಯಲು ಸಾಮಾನ್ಯರಲ್ಲಿ ಸಾಮಾನ್ಯನಾದ ನನಗೆ ಕೆಜೆಪಿ ಹಿರಿಯ ನಾಯಕರ ಸಹಕಾರದಿಂದ ಸ್ಪರ್ಧಿಸಲು ಅವಕಾಶ ಸಿಕ್ಕಿದೆ. ಚುನಾವಣೆಗೆ ಸಹಾಯವಾಗಲೆಂದು ಸಮಾಜದ ಹಿರಿಯರು, ಮುಖಂಡರು ಸ್ವಯಂ ಪ್ರೇರಿತರಾಗಿ ದೇಣಿಗೆ ಸಂಗ್ರಹಿಸಿ ನನಗೆ ನೀಡಿರುವುದು ಅಭಿನಂದನಾರ್ಹವಾಗಿದೆ. ಈ ಅಳಿಲು ಸೇವೆಗೆ ಬೆಲೆ ಕಟ್ಟಲಾಗದು. ಸಮಾಜದ ಎಲ್ಲ ಮುಖಂಡರು ಹಾಗೂ ಯುವಕರು ನನಗೆ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಪಕ್ಷದ ಹಿರಿಯ ಮುಖಂಡರಾದ ಹನುಮಂತಪ್ಪ ತೊಗರಿ, ದೊಡ್ಡಬಸಪ್ಪ ಅಂಗಡಿ, ಪ್ರಭು ಹವಾಲ್ದಾರ್, ದಲಿತ ಸಮಾಜದ ಮುಖಂಡರಾದ ಹನುಮಂತ ನಂದಿಹಾಳ, ಕೆಂಚಪ್ಪ ಜೂಲಗುಡ್ಡ, ಅಂಬಣ್ಣ ಬೆನಕನಾಳ, ನಿಂಗಪ್ಪ ಪರಂಗಿ, ಹನುಮಂತಪ್ಪ ಕುಣಿಕಲ್ಲೂರ, ದುರುಗಪ್ಪ ಹಟ್ಟಿ, ಚಿನ್ನಪ್ಪ ನಗನೂರ, ಯಮನಪ್ಪ ಈಚನಾಳ, ಆನಂದ, ಮುತ್ತಪ್ಪ ಇದ್ದರು.