ಇಂದಿನಿಂದ 25ರ ವರೆಗೆ ಹನುಮ ಜಯಂತಿ ಉತ್ಸವ
ರಾಯಚೂರು: ನಗರದ ಗಂಗಾನಿವಾಸ ಬಳಿಯ ಮುಂಗ್ರಿ ಪ್ರಾಣದೇವರ ದೇವಸ್ಥಾನದಲ್ಲಿ ಏ.19ರಿಂದ ಏ.25ರವರೆಗೆ ಹನುಮ ಜಯಂತಿ ಆಯೋಜಿಸಲಾಗಿದೆ.
ಸುವಿದ್ಯೇಂದ್ರ ತೀರ್ಥರು ಏ.19ರಂದು ಸಂಜೆ 6.30ಕ್ಕೆ ಹನುಮ ಜಯಂತಿ ಉತ್ಸವ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಏ.19ರಿಂದ 25ರವರೆಗೆ ದಿನವೂ ಸಂಜೆ 7ಕ್ಕೆ ಶ್ರೀನಾಥ ಆಚಾರ್ ಕೊಪ್ಪರ್ ಅವರಿಂದ ರುಕ್ಮಿಣೀಶ ವಿಜಯ ಪ್ರವಚನ ನಡೆಯಲಿದೆ.
ಏ.25ರಂದು ಬೆಳಗ್ಗೆ 5.30ಕ್ಕೆ ಹನುಮ ಜಯಂತಿ ಅಂಗವಾಗಿ ಪ್ರಾಣದೇವರ ತೊಟ್ಟಿಲೋತ್ಸವ ನಡೆಯಲಿದೆ. ಬೆಳಗ್ಗೆ 6ರಿಂದ 7ರವರೆಗೆ ಮುಂಗ್ಲಿ ಆಂಜನೇಯ ದೇವರಿಗೆ ಮಧು ಅಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ಎಳೆ ನೀರಿನ ಅಭಿಷೇಕ ನೆರವೇರಿಸಲಾಗುತ್ತದೆ.
ಬೆಳಗ್ಗೆ 7.30ರಿಂದ ಕೋಟೆಯ ಮುಖ್ಯ ಬೀದಿಗಳಲ್ಲಿ ಪ್ರಾಣದೇವರ ಪಲ್ಲಕ್ಕಿ ಉತ್ಸವದ ಮೆರವಣಿಗೆ ನಡೆಸಲಾಗುತ್ತದೆ. ಬೆಳಗ್ಗೆ 9.30ಕ್ಕೆ ಮುಂಗ್ಲಿ ಪ್ರಾಣದೇವರ ರಥೋತ್ಸವ ನಡೆಯಲಿದ್ದು, ಬೆಳಗ್ಗೆ 10.45ಕ್ಕೆ ರುಕ್ಮಿಣೀಶ ವಿಜಯ ಪ್ರವಚನದ ಮಂಗಳ ಮಹೋತ್ಸವ ನೆರವೇರಲಿದೆ.
ಅದೇ ದಿನ ಸಂಜೆ 7ರಿಂದ 9.30 ರವರೆಗೆ ಬೆಂಗಳೂರಿನ ಚಂದ್ರಿಕಾ ಸಂದೀಪ್ ಅವರಿಂದ ದಾಸವಾಣಿ ಹಾಗೂ ನಗರದ ಶ್ರೀಕೃಷ್ಣ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ದಾಸವಾಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಹನುಮ ಜಯಂತಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಂಘಟಕರು ಕೋರಿದ್ದಾರೆ.