ಮಾದಿಗ ಸಮಾಜಕ್ಕೆ ವಂಚನೆ-ಕಾಂಗ್ರೆಸ್ ವಿರುದ್ಧ ಮತ: ನಿರ್ಧಾರ
ರಾಯಚೂರು: ಲಿಂಗಸ್ಗೂರು ವಿಧಾನಸಭೆ ಕ್ಷೇತ್ರದಲ್ಲಿ ಮಾದಿಗ ಜನಾಂಗದವರಿಗೆ ಟಿಕೆಟ್ ನೀಡದೇ ವಂಚಿಸಿರುವ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಲು ನಿರ್ಧರಿಸಿರುವುದಾಗಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಎಚ್ಚರಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆ ಜಿಲ್ಲಾಧ್ಯಕ್ಷ ಹೇಮರಾಜ್ ಅಸ್ಕಿಹಾಳ್, ಪ್ರಧಾನ ಕಾರ್ಯದರ್ಶಿ ಅಬ್ರಾಹಂ ಹೊನ್ನಟಗಿ ಮತ್ತಿತರರು, ಲಿಂಗಸ್ಗೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮೊದಲಿಗೆ ಮಾದಿಗ ಸಮಾಜದ ಮುಖಂಡ ಪಾಮಯ್ಯ ಮುರಾರಿ ಅವರಿಗೆ ಟಿಕೆಟ್ ಪ್ರಕಟಿಸಿತ್ತು. ಆದರೆ ಆನಂತರದಲ್ಲಿ ಉದ್ಯಮಿ ಡಿ.ಎಸ್. ಹೂಲಿಗೇರಿ ಅವರಿಗೆ ಟಿಕೆಟ್ ನೀಡುವ ಮೂಲಕ ಮಾದಿಗ ಸಮಾಜಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ನ ಈ ರೀತಿಯ ವರ್ತನೆಯು ಮುಂದಿನ ದಿನಗಳಲ್ಲಿ ದಲಿತ ಮತ್ತು ಹಿಂದುಳಿದವರನ್ನು ರಾಜ್ಯದ ಸಿಎಂ ಆಗಿ ಆಯ್ಕೆ ಮಾಡುವ ನಿಟ್ಟಿನಲ್ಲಿ ಪಕ್ಷದ ನಿಲುವು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಮಾದಿಗ ಸಮಾಜದ ಮತದಾರರು ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಲು ನಿರ್ಧರಿಸಿರುವುದಾಗಿ ಅವರು ತಿಳಿಸಿದ್ದಾರೆ. ಲಿಂಗಸ್ಗೂರು ಕ್ಷೇತ್ರದಲ್ಲಿ ಸುಮಾರು 40 ಸಾವಿರ ಮತದಾರರು ಈ ಸಮಾಜಕ್ಕೆ ಸೇರಿದ್ದು, ಈ ಬಾರಿ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಲಿದ್ದಾರೆಂದು ತಿಳಿಸಿದ್ದಾರೆ.