ಯಾಸೀನ್ ಆಸ್ತಿ ಪತ್ರದಲ್ಲಿ ತಪ್ಪು ಮಾಹಿತಿ: ನೋಟಿಸ್ ಜಾರಿ
ರಾಯಚೂರು: ನಗರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಯಾಸೀನ್ ಅವರು ತಮ್ಮ ಆಸ್ತಿ ಪ್ರಮಾಣ ಪತ್ರದಲ್ಲಿ ತಪ್ಪು ಮಾಹಿತಿ ಒದಗಿಸಿದ್ದಾರೆಂದು ಬಿಜೆಪಿ ಅಭ್ಯರ್ಥಿ ತ್ರಿವಿಕ್ರಮ್ ಜೋಷಿ ಅವರು ನಾಮಪತ್ರಗಳ ಪರಿಶೀಲನೆ ವೇಳೆ ಗುರುವಾರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಕುರಿತು ವಿಚಾರಣೆ ನಡೆಸಲು ಏ.19ರಂದು ಹಾಜರಾಗುವಂತೆ ಚುನಾವಣಾಧಿಕಾರಿ ಮಂಜುಶ್ರೀ ಅವರು ನೋಟಿಸ್ ಜಾರಿ ಮಾಡಿದ್ದಾರೆ.
ನಗರದ ಸಹಾಯಕ ಆಯುಕ್ತೆ ಹಾಗೂ ಚುನಾವಣಾಧಿಕಾರಿ ಮಂಜುಶ್ರೀ ಅವರ ಕಚೇರಿಯಲ್ಲಿ ಗುರುವಾರ ಬೆಳಗ್ಗೆ ನಡೆದ ನಾಮಪತ್ರಗಳ ಪರಿಶೀಲನೆ ವೇಳೆ ಬಿಜೆಪಿ ಅಭ್ಯರ್ಥಿ ತ್ರಿವಿಕ್ರಮ್ ಜೋಷಿ ಅವರು, ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಯಾಸೀನ್ ಅವರು ತಮ್ಮ ಆಸ್ತಿ ಘೋಷಣೆಗೆ ಸಂಬಂಧಿಸಿದ ಪ್ರಮಾಣ ಪತ್ರದಲ್ಲಿ ತಪ್ಪು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ನಾಮಪತ್ರ ತಿರಸ್ಕರಿಸುವಂತೆ ಮನವಿ ಮಾಡಿದರು.
ಸುಳ್ಳು ಮಾಹಿತಿ: ಈ ಬಗ್ಗೆ ಚುನಾವಣಾಧಿಕಾರಿಗೆ ದೂರು ಸಲ್ಲಿಸಿ, ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಯಾಸೀನ್ ಅವರು 2008 ಮತ್ತು 2013ರ ಚುನಾವಣೆಗಳಲ್ಲಿ ತಪ್ಪು ಪ್ರಮಾಣ ಪತ್ರ ಸಲ್ಲಿಸಿದ್ದಾರೆ. 2008ರ ಚುನಾವಣೆಯಲ್ಲಿ ಯಾಸೀನ್ ಅವರು, ತಮ್ಮ ಪತ್ನಿ ಹೆಸರಿನಲ್ಲಿ ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ಒಂದೂವರೆ ಎಕರೆ ಜಮೀನು 20 ಲಕ್ಷ ಬೆಲೆ ಬಾಳುವಂಥದ್ದು ಇದೆ. ಅದರ ಸರ್ವೆ ನಂ. 15/1 ಎಂದು ದಾಖಲಿಸಿದ್ದಾರೆ.
ಪ್ರಸಕ್ತ ಚುನಾವಣೆಯ ನಾಮಪತ್ರದೊಂದಿಗೆ ಸಲ್ಲಿಸಿರುವ ಆಸ್ತಿ ಸಂಬಂಧಿತ ಪ್ರಮಾಣ ಪತ್ರದಲ್ಲಿ ತಮ್ಮ ಪತ್ನಿಯ ಹೆಸರಿನಲ್ಲಿ ವೈಟ್ಫೀಲ್ಡ್ನಲ್ಲಿ 1991ರಲ್ಲಿ ಖರೀದಿಸಿದ 23 ಗುಂಟೆ ಆಸ್ತಿಯಿದೆ. ಅದರ ಸರ್ವೆ ನಂ. 56, 57/1 ಎಂದು ದಾಖಲಿಸಿದ್ದಾರೆ. 1991ರಲ್ಲಿಯೇ ಈ ಜಮೀನು ಖರೀದಿಸಿದ್ದರೆ ಸೈಯದ್ ಯಾಸೀನ್ ಅವರು 2008ರ ಚುನಾವಣೆಯ ಪ್ರಮಾಣ ಪತ್ರದಲ್ಲಿ ಏಕೆ ದಾಖಲಿಸಲಿಲ್ಲ ಎಂದು ಬಿಜೆಪಿ ಅಭ್ಯರ್ಥಿ ದೂರಿನಲ್ಲಿ ಆಕ್ಷೇಪಿಸಿದ್ದಾರೆ.
ನಾಮಪತ್ರ ತಿರಸ್ಕರಿಸಿ: ಅದೇ ರೀತಿ ಪ್ರಸಕ್ತ ಚುನಾವಣೆಯ ಹಿನ್ನೆಲೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಬೆಂಗಳೂರಿನ ಎಚ್ಎಎಲ್ 2ನೇ ಹಂತದಲ್ಲಿ ತಮ್ಮ ಪತ್ನಿ ಹೆಸರಿನಲ್ಲಿ 5,500 ಚದರ ಅಡಿ ಕಟ್ಟಡವಿರುವ ಜಾಗ ಇರುವ ಬಗ್ಗೆ ತಿಳಿಸಿದ್ದಾರೆ. ಅದನ್ನು 2007ರಲ್ಲಿಯೇ ಖರೀದಿಸಿದ್ದಾಗಿಯೂ ತಿಳಿಸಿದ್ದಾರೆ. ಆದರೆ ಸೈಯದ್ ಯಾಸೀನ್ ಅವರು ಈ ಆಸ್ತಿ ಇರುವಿಕೆ ಬಗ್ಗೆ 2008ರ ಚುನಾವಣೆಯ ಪ್ರಮಾಣ ಪತ್ರದಲ್ಲಿ ದಾಖಲಿಸಿಲ್ಲ ಎಂದು ಆಕ್ಷೇಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಯಾಸೀನ್ ಅವರು ಸುಳ್ಳು ಆಸ್ತಿ ಪ್ರಮಾಣ ಪತ್ರಗಳನ್ನು ನೀಡಿರುವುದು ಹಾಗೂ ಸಾರ್ವಜನಿಕ ಅಧಿಕಾರಿಗಳನ್ನು ದಾರಿ ತಪ್ಪಿಸುವ ಕಾರ್ಯ ಮಾಡಿದ್ದಾರೆ. ಕಾರಣ ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಯಾಸೀನ್ ಅವರ ನಾಮಪತ್ರ ತಿರಸ್ಕರಿಸುವಂತೆ ಮನವಿ ಸಲ್ಲಿಸಿದರು.
ನೋಟಿಸ್ ಜಾರಿ: ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿರುವ ಹಿನ್ನೆಲೆ ಅವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆಯೂ ಬಿಜೆಪಿ ಅಭ್ಯರ್ಥಿ ತ್ರಿವಿಕ್ರಮ್ ಜೋಷಿ ಚುನಾವಣಾಧಿಕಾರಿಗೆ ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ತ್ರಿವಿಕ್ರಮ್ ಜೋಷಿ ಅವರ ದೂರು ಪರಿಗಣಿಸಿದ ಚುನಾವಣಾಧಿಕಾರಿ ಮಂಜುಶ್ರೀ ಅವರು, ಈ ಕುರಿತು ವಿಚಾರಣೆಯನ್ನು ಏ.19ರಂದು ನಡೆಸಲು ನಿರ್ಧರಿಸಿ ದೂರುದಾರರು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಯಾಸೀನ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಿದ್ದಾರೆ.