ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಲಿಂಗಸ್ಗೂರು ಕ್ಷೇತ್ರದ ಟಿಕೆಟ್ ಹಂಚಿಕೆ ಡೀಲ್: ಆರೋಪ

Lingaraj Badiger
Updated On : 19 Apr 2013, 11:39 am

ರಾಯಚೂರು: ಲಿಂಗಸ್ಗೂರು ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಡೀಲ್ ನಡೆಸಲಾಗಿದೆ. ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಅವರು ತಮಗೆ ನೀಡಲಾಗಿದ್ದ ಟಿಕೆಟ್ ತಪ್ಪಿಸಿ ಹಾಲಿ ಅಭ್ಯರ್ಥಿ ಹೂಲಿಗೇರಿ ಅವರಿಗೆ ದೊರಕಿಸುವ ಕಾರ್ಯ ಮಾಡಿದ್ದಾರೆಂದು ಲಿಂಗಸ್ಗೂರು ಕ್ಷೇತ್ರದ ಕಾಂಗ್ರೆಸ್ ನಾಯಕ ಪಾಮಯ್ಯ ಮುರಾರಿ ಆರೋಪಿಸಿದ್ದಾರೆ.
ನಗರದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮಗೆ ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಟಿಕೆಟ್ ಘೋಷಿಸಿತ್ತು. ಆದರೆ ಆನಂತರದಲ್ಲಿ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಅವರ ಕೈವಾಡದಿಂದ ತಮಗೆ ಟಿಕೆಟ್ ತಪ್ಪಿಸಿ ಡಿ.ಎಸ್. ಹೂಲಿಗೇರಿ ಅವರಿಗೆ ನೀಡಲಾಗಿದೆ. ಅದಕ್ಕಾಗಿ ಭಾರೀ ಮೊತ್ತದ ಡೀಲ್ ನಡೆದಿದೆ ಎಂದು ಆರೋಪಿಸಿದರು.
ಮಾದಿಗ ಸಮಾಜಕ್ಕೆ ವಂಚನೆ: ಕಳೆದ ಅನೇಕ ವರ್ಷಗಳಿಂದ ಲಿಂಗಸ್ಗೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟುವಲ್ಲಿ ತಾವು ಶ್ರಮಿಸಿದ್ದು, ಸದ್ಯ ಕಾಂಗ್ರೆಸ್ ಹೈಕಮಾಂಡ್‌ನವರು ಈಚೆಗಷ್ಟೇ ದೂರದ ಬಾಗಲಕೋಟೆಯಿಂದ ಬಂದಂಥ ವ್ಯಕ್ತಿಗೆ ಟಿಕೆಟ್ ನೀಡುವ ಮೂಲಕ ತಮ್ಮ ಮಾದಿಗ ಸಮಾಜಕ್ಕೆ ವಂಚಿಸಿದ್ದಾರೆಂದು ದೂರಿದರು.
ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಕಾಂಗ್ರೆಸ್‌ನ ಕೆಲ ನಾಯಕರು ಈ ನಿಟ್ಟಿನಲ್ಲಿ ತಮ್ಮ ವಿರುದ್ಧ ಸಂಚು ನಡೆಸಿ ಟಿಕೆಟ್ ತಪ್ಪಿಸಿದ್ದಾರೆ. ಪಕ್ಷದ ಅಧ್ಯಕ್ಷ ಪರಮೇಶ್ವರ್ ಸೇರಿದಂತೆ ಎಲ್ಲರೂ ತಮಗೆ ಅನ್ಯಾಯ ಮಾಡಿದ್ದಾರೆ. ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದ ತಮಗೆ ಟಿಕೆಟ್ ನೀಡುವಲ್ಲಿ ತಾರತಮ್ಯ ಮಾಡಿದ್ದಾರೆಂದು ಟೀಕಿಸಿದರು.
ಕೆಜೆಪಿ ಅಭ್ಯರ್ಥಿಗೂ ತಮಗೂ ಸಂಬಂಧವಿಲ್ಲ: ಲಿಂಗಸ್ಗೂರು ಕ್ಷೇತ್ರದಲ್ಲಿ ತಮ್ಮ ಟಿಕೆಟ್ ಕೈ ತಪ್ಪಲು ಅಲ್ಲಿನ ಕಣದಲ್ಲಿರುವ ಕೆಜೆಪಿ ಅಭ್ಯರ್ಥಿ ಎಚ್.ಬಿ.ಮುರಾರಿ ಅವರು ತಮ್ಮ ಸಂಬಂಧಿ ಎಂಬ ಕಾರಣ ನೀಡಲಾಗಿದೆ. ಆದರೆ ಕೆಜೆಪಿ ಅಭ್ಯರ್ಥಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹೈಕಮಾಂಡ್‌ಗೆ ಸ್ಪಷ್ಟಪಡಿಸಿದರೂ ಟಿಕೆಟ್ ನೀಡಲಿಲ್ಲ ಎಂದು ದೂರಿದರು.
ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ರಾಜಾ ರಾಯಪ್ಪ ನಾಯಕ ಹಾಗೂ ಜೆಡಿಎಸ್ ಅಭ್ಯರ್ಥಿ ರಾಜಾ ಅಮರೇಶ್ ನಾಯಕ ಅವರು ಸಹೋದರರಾಗಿದ್ದು, ರಾಜಾ ರಾಯಪ್ಪ ನಾಯಕ ಅವರಿಗೇಕೆ ಹೈಕಮಾಂಡ್ ಟಿಕೆಟ್ ನೀಡಿತೆಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ತಮಗಾಗಿರುವ ಅನ್ಯಾಯದ ಹಿನ್ನೆಲೆಯಲ್ಲಿ ಶೀಘ್ರವೇ ತಮ್ಮ ಬೆಂಬಲಿಗರ ಹಾಗೂ ಸಮಾಜದ ಜನತೆಯೊಂದಿಗೆ ಸಮಾಲೋಚಿಸಿ ಕಾಂಗ್ರೆಸ್‌ನಲ್ಲಿ ಮುಂದುವರಿಯಬೇಕೆ ಬೇಡವೇ ಎಂಬ ಬಗ್ಗೆ ಏ.20ರಂದು ನಿರ್ಧಾರ ಪ್ರಕಟಿಸುವುದಾಗಿ ಪಾಮಯ್ಯ ಮುರಾರಿ ಹೇಳಿದರು.
ಹಣಕ್ಕಾಗಿ ಟಿಕೆಟ್: ರಾಜ್ಯ ಕಾಂಗ್ರೆಸ್ ನಾಯಕರ ವರ್ತನೆಯಿಂದ ತಮಗೆ ನೋವಾಗಿದೆ. ಹಣಕ್ಕಾಗಿ ಟಿಕೆಟ್ ಮಾರಿಕೊಂಡಿರುವುದು ಸ್ಪಷ್ಟ. ಜಿಲ್ಲಾ ಕಾಂಗ್ರೆಸ್‌ನ ಅನೇಕರು ತಮ್ಮ ಬೆಂಬಲಕ್ಕೆ ನಿಂತಿದ್ದರೂ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಅವರ ಕಾರಣದಿಂದಲೇ ತಮಗೆ ಟಿಕೆಟ್ ಕೈತಪ್ಪಿತೆಂದು ದೂರಿದರು.
ತಮಗಾಗಿರುವ ಅನ್ಯಾಯದ ಬಗ್ಗೆ ಎಐಸಿಸಿ ಚುನಾವಣೆ ವೀಕ್ಷಕ ರುದ್ರರಾಜು ಪದ್ಮರಾಜು ಅವರಿಗೆ ದೂರು ಸಲ್ಲಿಸಿರುವುದಾಗಿ ಅವರು ಈ ವೇಳೆ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಜಿಪಂ ಮಾಜಿ ಸದಸ್ಯ ಸಿದ್ದರಾಮಪ್ಪ ನೀರಮಾನವಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement