'ಅಗ್ನಿ' ಅಣುಕು ಪ್ರದರ್ಶನ
ಜೇವರ್ಗಿ: ಅಗ್ನಿ ಶಾಮಕ ಸೇವಾ ಸಪ್ತಾಹದಂಗವಾಗಿ ಹಾಗೂ ಹುತಾತ್ಮ ಅಗ್ನಿ ಶಾಮಕ ಸಿಬ್ಬಂದಿ ನೆನಪಿಗಾಗಿ ಪಟ್ಟಣದ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಜೇವರ್ಗಿ ಅಗ್ನಿ ಶಾಮಕ ಠಾಣೆಯ ವತಿಯಿಂದ ಅಣುಕು ಪ್ರದರ್ಶನ ನಡೆಸಲಾಯಿತು.
ಪ್ರಭಾರ ಅಗ್ನಿ ಶಾಮಕ ಠಾಣಾಧಿಕಾರಿ ರಮೇಶ ಪವಾರ ನೇತೃತ್ವದಲ್ಲಿ ಸಿಬ್ಬಂದಿ ಸೋಮಶೇಖರ, ಚನ್ನಬಸ್ಸು ಗೋಗಿ, ಗಂಗಪ್ಪ ನಾಯಕ, ಹಣಮಂತ ವ್ಹಾಯ, ವಿಜಯಕುಮಾರ ಇವರು ಅಣುಕು ಪ್ರದರ್ಶನದಲ್ಲಿ ಭಾಗಿಯಾಗಿದ್ದರು.
ಸಿಬ್ಬಂದಿ ಶಿವಾನಂದ ಲೋಣಿ ಅವರು ಸಾರ್ವಜನಿಕರಿಗೆ ಅಗ್ನಿ ಅನಾಹುತ ಸಂಭವಿಸಿದಾಗ ಅನುಸರಿಸಬೇಕಾದ ವಿಧಾನದ ಬಗ್ಗೆ ತಿಳಿ ಹೇಳಿದರು. ಸರಿಯಾದ ವಿಳಾಸ ಹಾಗೂ ತಮ್ಮ ದೂರವಾಣಿ ಸಂಖ್ಯೆಯನ್ನು ತಪ್ಪದೇ ಕೊಡಬೇಕು, ಬೆಂಕಿ ಅನಾಹುತ ದೊಡ್ಡದಿರಲಿ, ಚಿಕ್ಕದಿರಲಿ ಅಗ್ನಿ ಶಾಮಕ ಇಲಾಖೆಗೆ ತಿಳಿಸಬೇಕು, ಪೆಟ್ರೋಲ್ ಮತ್ತು ಡಿಸೇಲ್ನಿಂದ ಬೆಂಕಿ ಅನಾಹುತ ಸಂಭವಿಸಿದಾಗ ನೀರು ಸುರಿಯಬಾರದು, ಅದರ ಬದಲು ಮಣ್ಣು ಅಥವಾ ಮರಳು ಸುರಿಯಬೇಕು, ಮನೆಯಲ್ಲಿ ಅಡುಗೆ ಅನೀಲ ಸೋರಿಕೆಯಾದಾಗ ಕಿಡಕಿ, ಬಾಗಿಲುಗಳನ್ನು ತೆರೆದು ವಿದ್ಯುತ್ ಬಲ್ಬಗಳನ್ನು ಚಾಲು ಮಾಡಬಾರದು ಎಂಬಂತಹ ಮಾಹಿತಿಯನ್ನು ಸವಿಸ್ತಾರವಾಗಿ ತಿಳಿಸಿದರು.