ಕಾಣದ ಅಭಿವೃದ್ಧಿ, ನಾಗರಿಕರ ಪರದಾಟ
ಕನ್ನಡಪ್ರಭ ವಾರ್ತೆ ರಾಯಚೂರು ಏ.19
ಸರ್ಕಾರದ ಕೋಟ್ಯಂತರ ರು. ಯೋಜನೆಗಳು ನಗರಕ್ಕೆ ಮಂಜೂರಾದರೂ ನಗರದಲ್ಲಿ ಸೌಲಭ್ಯಗಳ ಕೊರತೆಯಿದೆ. ಮೂಲಸೌಲಭ್ಯಗಳಿಲ್ಲದೇ ಜನತೆ ಪರದಾಡುತ್ತಿದ್ದಾರೆ. ಸ್ವಾತಂತ್ರ್ಯಾನಂತರ ಆಯ್ಕೆಯಾದ ಎಲ್ಲರೂ ಜನರತ್ತ ನಿರ್ಲಕ್ಷ್ಯ ತೋರಿದ್ದಾರೆ. ಜನತೆ ಸಂಕಷ್ಟಗಳ ಮಧ್ಯೆಯೇ ಬದುಕು ಸಾಗಿಸುವಂತಾಗಿದೆ ಎಂದು ನಗರ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಹಾರೇಸ್ ಸಿದ್ದಿಖಿ ಆರೋಪಿಸಿದರು.
ಅವರು ನಗರದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಕೆಲ ದಿನಗಳಿಂದ ತಾವು ಚುನಾವಣೆ ಪ್ರಚಾರಕ್ಕೆ ತೆರಳಿದಲ್ಲೆಲ್ಲ ರಾಜಕೀಯ ವ್ಯಕ್ತಿಗಳ ಬಗ್ಗೆ ಮತದಾರರಲ್ಲಿ ತೀವ್ರ ಆಕ್ರೋಶವಿರುವುದು ಅನುಭವಕ್ಕೆ ಬಂದಿದೆ. ಮತದಾರರು ರಾಜಕೀಯ ನಾಯಕರು ನೀಡಿದ ಪೊಳ್ಳು ಭರವಸೆಗಳಿಂದ ಮೋಸ ಹೋಗಿರುವುದು ಇದರಿಂದ ಸಾಬೀತಾಗಿದೆ ಎಂದು ದೂರಿದರು.
ಪ್ರಯಾಸ: ರಾಯಚೂರು ನಗರ ಕ್ಷೇತ್ರದ ಅನೇಕ ಕೊಳಚೆ ಪ್ರದೇಶಗಳು ಹಾಗೂ ಬಡವರು ವಾಸವಾಗಿರುವ ಪ್ರದೇಶಗಳಲ್ಲಿ ಮಹಿಳೆಯರಿಗೆ ಸಮರ್ಪಕ ಶೌಚಾಲಯಗಳಿಲ್ಲ. ಇದರಿಂದಾಗಿ ಮಹಿಳೆಯರು ಪ್ರಯಾಸಪಡುವಂತಾಗಿದೆ. ವರ್ಷದಿಂದ ವರ್ಷಕ್ಕೆ ಕೊಳಚೆ ಪ್ರದೇಶದ ಅಭಿವೃದ್ಧಿಗೆ ಕೋಟ್ಯಂತರ ರು. ಸರ್ಕಾರದಿಂದ ಬಿಡುಗಡೆಯಾಗಿದ್ದರೂ ಕೊಳಚೆ ಪ್ರದೇಶಗಳಲ್ಲಿ ವಾಸವಾಗಿರುವವರ ಪರಿಸ್ಥಿತಿ ಸುಧಾರಣೆ ಕಂಡಿಲ್ಲ ಎಂದು ಟೀಕಿಸಿದರು.
ಕಳೆದ ಅನೇಕ ದಶಕಗಳಿಂದ ನಗರ ಕ್ಷೇತ್ರವನ್ನು ಪ್ರತಿನಿಧಿಸಿದ ಎಲ್ಲ ಶಾಸಕರು ಅಭಿವೃದ್ಧಿ ನಿರ್ಲಕ್ಷಿಸಿದ್ದಾರೆ. ದಲಿತರು, ಹಿಂದುಳಿದವರ ಏಳಿಗೆಗೆ ಬಿಡುಗಡೆಯಾದ ಅನುದಾನದ ಸಮರ್ಪಕ ಬಳಕೆಯಾಗಿಲ್ಲ. ಆ ಮೂಲಕ ಹಿಂದುಳಿದ ವರ್ಗದವರ ಏಳಿಗೆ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು.
ನಗರದಲ್ಲಿ ಬಸ್ ನಿಲ್ದಾಣ, ನಗರಸಭೆ ಕಟ್ಟಡ, ಜಿಪಂ ಕಟ್ಟಡಗಳನ್ನು ಅವುಗಳಿದ್ದಲ್ಲಿಯೇ ಹೊಸದಾಗಿ ನಿರ್ಮಿಸಲಾಗಿದೆ. ಇಂಥ ಚಿಂತನೆಯಿಂದ ನಗರದ ಅಭಿವೃದ್ಧಿ ಅಸಾಧ್ಯ. ವಿಶಾಲವಾದ ಪ್ರದೇಶದಲ್ಲಿ ಎಲ್ಲ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸುವುದರಿಂದ ಎಲ್ಲರಿಗೂ ಅನುಕೂಲ ಹಾಗೂ ಉದ್ಯೋಗ ಸೃಷ್ಟಿಯಾಗುವ ಮೂಲಕ ಅನೇಕರಿಗೆ ನೆರವಾಗುತ್ತದೆ ಎಂದು ಹೇಳಿದರು.
ಅವ್ಯವಸ್ಥೆ: ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ಬೆಳೆಯಲಾಗುತ್ತದೆ. ವಿದೇಶಕ್ಕೂ ಅಕ್ಕಿ ರಫ್ತಾಗುತ್ತದೆ. ಹಾಗೆಯೇ ತಾಲೂಕಿನಲ್ಲಿ ವಿದ್ಯುತ್ ಉತ್ಪಾದಿಸುತ್ತಿದ್ದರೂ ಅದರಿಂದ ಸ್ಥಳೀಯರಿಗೆ ವಿದ್ಯುತ್ ಅಭಾವದ ಸಮಸ್ಯೆ ಪರಿಹಾರ ಕಂಡಿಲ್ಲ. ಇಂಥ ಅವ್ಯವಸ್ಥೆಯಿಂದ ಮತದಾರರು ಬೇಸತ್ತಿದ್ದಾರೆಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಎಸ್ಪಿ ಮುಖಂಡ ನರಸಪ್ಪ, ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ನೊಂದಿಗೆ ಮಾಜಿ ಶಾಸಕ ಪಾಪಾರೆಡ್ಡಿ ಅವರಿಗೆ ಮೊದಲಿನಿಂದಲೂ ಸಖ್ಯವಿತ್ತು. ಸದ್ಯ ಅವರು ಬಹಿರಂಗವಾಗಿ ಕಾಂಗ್ರೆಸ್ ಸೇರಿದ್ದಾರೆ. ಆದರೆ ಕಾಂಗ್ರೆಸ್ಗೆ ಪಾಪಾರೆಡ್ಡಿ ಆಗಮನದಿಂದ ಯಾವುದೇ ಲಾಭವಾಗದು ಎಂದು ಅವರು ಲೇವಡಿ ಮಾಡಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಹನುಮಂತಪ್ಪ ವಕೀಲರು, ಜಯಣ್ಣ, ಹನುಮಂತ ಭಂಡಾರಿ, ಜೇಮ್ಸ್, ನರಸಿಂಹಲು ಸೇರಿದಂತೆ ಅನೇಕರಿದ್ದರು.