'ದಲಿತ ಲೋಕ ಅಕ್ಷರ ಲೋಕವಾಗಬೇಕು'
ಗುಲ್ಬರ್ಗ: ಗುಲ್ಬರ್ಗ ವಿಶ್ವವಿದ್ಯಾಲಯದ ಡಾ. ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆ ವತಿಯಿಂದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.
ಡಾ. ಅರ್ಜುನ ಗೊಳಸಂಗಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ, ದಲಿತ ಲೋಕ ಅಕ್ಷರ ಲೋಕವಾಗಬೇಕು. ಊಟ, ವಸತಿ, ವಿವಾಹದಲ್ಲಿ ಭೇದ ಹೋಗಬೇಕು. ನಾಮಾಂತರ, ಸ್ಥಳಾಂತರ, ಮತಾಂತರಗಳ ಮೂಲಕ ಸಾಮಾಜಿಕ ನ್ಯಾಯ ಸಾಧ್ಯ ಎಂದು ಹೇಳಿದರು.
ಉರಿಲಿಂಗ ಪೆದ್ದಿಮಠ ಮೈಸೂರಿನ ಡಾ. ಜ್ಞಾನಪ್ರಕಾಶ ಸಾನ್ನಿಧ್ಯ ವಹಿಸಿ ಮಾತನಾಡಿ, ಮಾನವ ನಿರ್ಮಿತ ಧರ್ಮಗಳಿಂದ ಸರ್ವಧರ್ಮ ಸಮನ್ವಯ ಸಾಧ್ಯವಿಲ್ಲ. ಮಾನವ ನಿರ್ಮಿತ ಸಂವಿಧಾನ ಮತ್ತು ಕಾನೂನಿನ ಮೂಲಕ ಸಾಮಾಜಿಕ ನ್ಯಾಯ, ಸಾರ್ವಭೌಮತ್ವ ಸಾಧ್ಯ ಎಂದು ಹೇಳಿದರು.
ಕುಲಸಚಿವ ಪ್ರೊ. ದಯಾನಂದ ಅಗಸರ, ಮೌಲ್ಯಮಾಪನ ಕುಲಸಚಿವ ಪ್ರೊ. ಎಸ್.ವಿ. ಹಲಸೆ ಉಪಸ್ಥಿತರಿದ್ದರು. ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ ಅಧ್ಯಕ್ಷತೆ ವಹಿಸಿದ್ದರು.