ನಾಳೆ ಸಭೆ
ಗುಲ್ಬರ್ಗ: ನಗರದ ಕೈಲಾಸ ನಗರದಲ್ಲಿರುವ ಮಾತೆ ಮಾಣಿಕೇಶ್ವರಿ ದೇವಾಲಯದ ಹತ್ತಿರ ಪ್ಯಾರಾ ಮಿಲಿಟ್ರಿ ಫೊರ್ಸೆಸ್ ನಿವೃತ್ತಿ ಸೈನಿಕರ ಸಂಘದ ಕಾರ್ಯಾಲಯದಲ್ಲಿ ಏ.21 ರಂದು ಬೆಳಗ್ಗೆ 10.30ಕ್ಕೆ ಸಂಘದ ಕಾರ್ಯನಿರ್ವಾಹಕ ಮಂಡಳಿಯ ಸಭೆ ಕರೆಯಲಾಗಿದೆ.ಸಂಘದ ಅಭಿವೃದ್ಧಿ ಕಲ್ಯಾಣ ಕಾರ್ಯ ಮತ್ತು 2-11-2012ರ ಕೇಂದ್ರ ಸರ್ಕಾರದ ಆದೇಶದ ಬಗ್ಗೆ ಚರ್ಚಿಸಲಾಗುವುದು. ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರು ಹಾಜರಾಗಿ ಸಲಹೆ- ಸೂಚನೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರ ಪಾಟೀಲ್ ಕೋರಿದ್ದಾರೆ.
ಪಾಲಕರಿಗೆ ಮನವಿ
ಗುಲ್ಬರ್ಗ: ಗುಲ್ಬರ್ಗ ನಗರ ರೈಲು ನಿಲ್ದಾಣದ ಹತ್ತಿರ ಮಾ.30 ರಂದು ನಾಲ್ಕು ವರ್ಷದ ಒಬ್ಬ ಗಂಡು ಮಗು ಪತ್ತೆಯಾಗಿದ್ದು, ನಗರದ ಅಮೂಲ್ಯ ಶಿಶುಗೃಹದಲ್ಲಿ ದಾಖಲಿಸಲಾಗಿದೆ. ಈ ಮಗುವು ಕಪ್ಪು ಬಣ್ಣ ಹೊಂದಿದ್ದು, ಪೋಲಿಯೋ ರೋಗಕ್ಕೆ ತುತ್ತಾಗಿದೆ. ಈತನ ಪಾಲಕರು ಪೋಷಕರು ಯಾರಾದರೂ ಇದ್ದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಮೂಲ್ಯ ಶಿಶುಗೃಹ ಕೇಂದ್ರಕ್ಕೆ 60 ದಿನದೊಳಗೆ ಸೂಕ್ತ ದಾಖಲಾತಿ ಪ್ರಸ್ತುತಪಡಿಸಿ ಮಗುವನ್ನು ಪಡೆದುಕೊಂಡು ಹೋಗಲು ಶಿಶುಗೃಹದ ಅಧೀಕ್ಷಕರು ಕೋರಿದ್ದಾರೆ. ಯಾರೂ ಬಾರದೆ ಇದ್ದಲ್ಲಿ ಮಗುವಿನ ದತ್ತು ಪ್ರಕ್ರಿಯೆ ಕಾನೂನು ಪ್ರಕಾರ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಧ್ಯಕ್ಷರ ಆಯ್ಕೆ
ಗುಲ್ಬರ್ಗ: ಟಿಪ್ಪು ಸುಲ್ತಾನ್ ಮುಸ್ಲಿಂ ಯುವ ಸಂಘದ ರಾಜ್ಯ ಕಾರ್ಯದರ್ಶಿ ತಲಾತ ಚಾಂದ ಹಾಗೂ ಜಂಟಿ ಕಾರ್ಯದರ್ಶಿ ಹಬಿಬ್ ಚಾವುಶ್ ಒಪ್ಪಿಗೆ ಮೇರೆಗೆ ಗುಲ್ಬರ್ಗ ಜಿಲ್ಲಾಧ್ಯಕ್ಷರನ್ನಾಗಿ ಮಿರ್ಜಾ ಅಲಫಖರ ಬೇಗ್ರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯ ಅಧ್ಯಕ್ಷ ಅರ್ಷದ್ ದಖನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಹ್ಮದ್ ಜಿಸಮ್ ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ, ಇಲಿಯಾಜೋದ್ದೀನ್ ಪಟೇಲ್ ಗುಲ್ಬರ್ಗ ದಕ್ಷಿಣ ಅಧ್ಯಕ್ಷರಾಗಿ, ಅಮೀರ್ ಶೇಖ್ ಗುಲ್ಬರ್ಗ ದಕ್ಷಿಣ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.ಮಿರ್ಜಾ ಭಕತ್ ಬೇಗ, ಮಿರ್ಜಾ ಅನ್ವರ ಬೇಗ, ಮಿರ್ಜಾ ಫಯಾಜ್ ಬೇಗ, ಮೋಹಸಿನ್, ಸಮೀರ ಶೇಖ ಸಮ್ಮುಖದಲ್ಲಿ ನೇಮಿಸಲಾಯಿತು.
ತರಬೇತಿ ಶಿಬಿರ
ಗುಲ್ಬರ್ಗ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ರಾಜ್ಯ ಮಟ್ಟದ 28ನೇ ಉದಯೋನ್ಮುಖ ಕನ್ನಡ ಜನಪ್ರಿಯ ವಿಜ್ಞಾನ ಬರಹಗಾರರ ಶಿಬಿರ ಮೇ 3ನೇ ವಾರ ಧಾರವಾಡದಲ್ಲಿ 5 ದಿನಗಳ ಕಾಲ ಹಮ್ಮಿಕೊಳ್ಳಲಾಗುತ್ತದೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಖಜಾಂಚಿ ಗಿರೀಶ ಕಾಡ್ಲೆವಾಡ ತಿಳಿಸಿದ್ದಾರೆ. ವಿಜ್ಞಾನ ಬರವಣಿಗೆಯಲ್ಲಿ ಆಸಕ್ತಿಯಿರುವ ವಿಜ್ಞಾನ ಶಿಕ್ಷಕರು, ವಿಜ್ಞಾನ ಪತ್ರಿಕೋದ್ಯಮಿಗಳು, ವರದಿಗಾರರು, ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಬಹುದು. ವಿಜ್ಞಾನ ಬರಹಗಾರರಿಂದ, ಸಂಪಾದಕರಿಂದ, ಸಂವಹನಕಾರರಿಂದ ಶಿಬಿರಾರ್ಥಿಗಳಿಗೆ ವಿಜ್ಞಾನ ಬರವಣಿಗೆಯ ಕುರಿತು ವಿವಿಧ ಕೌಶಲ್ಯ, ಆಕರಗಳು, ಶಬ್ದ-ಬಳಕೆ, ಅನುವಾದ, ವಿಜ್ಞಾನ ಪತ್ರಿಕೋದ್ಯಮ- ಸಂವಹನ ವಿಧಾನಗಳು ಮುಂತಾದ ಕ್ಷೇತ್ರಗಳಲ್ಲಿ ತರಬೇತಿ ನೀಡಲಾಗುವುದು. ಆಸಕ್ತರು ವೈಯಕ್ತಿಕ ವಿವರದೊಂದಿಗೆ ಭಾವಚಿತ್ರ,ಒಂದು ಸ್ವರಚಿತ ಲೇಖನವನ್ನು ಅರ್ಜಿ ಜೊತೆ ಗೌರವ ಕಾರ್ಯದರ್ಶಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಭವನ, 21ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು- 560 070 ವಿಳಾಸಕ್ಕೆ ಏ.25ರೊಳಗೆ ತಲುಪುವಂತೆ ಕಳುಹಿಸಬೇಕು. ವಿವರಕ್ಕೆ 94488 30454ಗೆ ಸಂಪರ್ಕಿಸಬಹುದು.