ಪಟೇಲ್ ರಸ್ತೆ ಹಮಾಲರಿಂದ ಕೆಲಸ; ಆಕ್ಷೇಪ
ರಾಯಚೂರು: ನಗರದ ಎಪಿಎಂಸಿಯಲ್ಲಿ ಪಟೇಲ್ ರಸ್ತೆಯ ಹಮಾಲರು ಕಾರ್ಯನಿರ್ವಹಿಸಲು ಎಪಿಎಂಸಿ ಗಂಜ್ ಹಮಾಲರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಎಪಿಎಂಸಿ ಗಂಜ್ ಹಮಾಲರ ಸಂಘದ ಅಧ್ಯಕ್ಷ ಪ್ರಹ್ಲಾದ ರೆಡ್ಡಿ ಸೇರಿದಂತೆ ಮತ್ತಿತರರು ಮನವಿ ಸಲ್ಲಿಸಿ, ಎಪಿಎಂಸಿ ಪ್ರದೇಶದಲ್ಲಿ ಇದುವರೆಗೆ ಗಂಜ್ ಹಮಾಲರು ಲಾರಿಯಿಂದ ಸರಕು ಇಳಿಸುವುದು ಹಾಗೂ ಏರಿಸುವ ಕಾರ್ಯ ಮಾಡುತ್ತಾ ಬಂದಿದ್ದಾರೆ. ಆದರೆ ಇತ್ತೀಚೆಗೆ ನಗರದ ಪಟೇಲ್ ರಸ್ತೆಯಲ್ಲಿರುವ ಮಳಿಗೆಗಳು ಎಪಿಎಂಸಿಗೆ ಸ್ಥಳಾಂತರಗೊಂಡಿದ್ದು ಪಟೇಲ್ ರಸ್ತೆಯ ಹಮಾಲರು ಕಾರ್ಯನಿರ್ವಹಿಸುತ್ತಿದ್ದು ಅದರಿಂದ ತಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ.
ಪಟೇಲ್ ರಸ್ತೆಯ ಅಂಗಡಿಗಳ ಮಾಲಿಕರು ಇತ್ತೀಚೆಗೆ ಪೊಲೀಸರನ್ನು ಕರೆತಂದು ಗಂಜ್ ಹಮಾಲರನ್ನು ಹೊರಹಾಕಿ ತಮ್ಮ ಹಮಾಲರಿಂದಲೇ ಕೆಲಸ ಮಾಡುಕೊಳ್ಳುತ್ತಿದ್ದಾರೆ. ಹೊರಗಡೆಯಿಂದ 100 ಜನ ಹಮಾಲರನ್ನು ಕರೆತಂದು ಕೆಲಸ ಮಾಡಿಸುತ್ತಿದ್ದಾರೆಂದು ಟೀಕಿಸಿದ್ದಾರೆ.
ಈ ಬಗ್ಗೆ ಜಿಲ್ಲಾಡಳಿತಕ್ಕೆ ಮೊದಲು ದೂರಿತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಇನ್ನಾದರೂ ಕೂಡಲೇ ಕ್ರಮ ಕೈಗೊಳ್ಳುವಂತೆ ಎಪಿಎಂಸಿ ಗಂಜ್ ಹಮಾಲರ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.