ಮತದಾರರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ
ಕಳೆದ ಚುನಾವಣೆಯಲ್ಲಿ ಶೇ.54ರಷ್ಟು ಮಾತ್ರ ಮತದಾನ: ಡಿಸಿ ಐತಿಹಾಸಿಕ ದಾಖಲೆಗೆ ಕ್ರಮ
ಕನ್ನಡಪ್ರಭ ವಾರ್ತೆ ರಾಯಚೂರು ಏ.19
ನಗರದ ರಂಗಮಂದಿರದ ಮುಂಭಾಗದಲ್ಲಿ ಶುಕ್ರವಾರ ಮತದಾರರ ಜಾಗೃತಿ ಕುರಿತ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲಾಧಿಕಾರಿ ಉಜ್ವಲ್ಕುಮಾರ್ ಘೋಷ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಗರದಲ್ಲಿ ಹಿಂದಿನ ಚುನಾವಣೆಗಳನ್ನು ಗಮನಿಸಿದಾಗ ಕೇವಲ ಶೇ. 53.9ರಷ್ಟು ಮತದಾನವಾಗಿದೆ. ಈ ಬಾರಿಯ ಚುನಾವಣೆ ಐತಿಹಾಸಿಕ ಮೈಲುಗಲ್ಲು ಆಗುವಂತೆ ಎಲ್ಲರೂ ಶ್ರಮವಹಿಸಿ ಪೂರ್ಣ ಪ್ರಮಾಣದ ಮತದಾನ ಮಾಡುವ ಅವಶ್ಯಕತೆಯಿದೆ ಎಂದು ಕರೆ ನೀಡಿದರು.
ಹಕ್ಕಿನ ಜಾಗೃತಿ: ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನಿಟ್ಟಿದ್ದು, ಮತದಾರರ ಜಾಗೃತಿಗಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ 15 ದಿನದಲ್ಲಿ ಮತದಾನದ ಮಹತ್ವ ಮತ್ತು ಅಮೂಲ್ಯವಾದ ಮತದಾನದ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸಲು ಸಲಹೆ ನೀಡಿದರು.
ಜಿಪಂ ಸಿಇಒ ಜ್ಞಾನಪ್ರಕಾಶ್ ಮಾತನಾಡಿ, ಮತದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ. ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಬೀದಿ ನಾಟಕಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆಯೋಜಿಸಲಾಗಿದೆ ಎಂದು ಹೇಳಿದರು.
ಈ ನಿಟ್ಟಿನಲ್ಲಿ ನಗರದಲ್ಲಿ ರಂಗೋಲಿ ಸ್ಪರ್ಧೆ, ಚಿತ್ರಕಲೆ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗಿದೆ ಎಂದು ತಿಳಿಸಿದರು.
ಬೀದಿ ನಾಟಕ: ಈ ಸಂದರ್ಭದಲ್ಲಿ ಕಲಾವಿದ ಡಿಂಗ್ರಿ ನರಸಪ್ಪ ಅವರ ತಂಡದಿಂದ ಮತದಾನದ ಮಹತ್ವ ಕುರಿತು ಬೀದಿ ನಾಟಕ ಪ್ರದರ್ಶನ ನೀಡಲಾಯಿತು. ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಯಿತು. ಕಾರ್ಯಕ್ರಮದಲ್ಲಿ ಚುನಾವನಾ ವೀಕ್ಷಕ ಡಿ. ಬ್ಯಾನರ್ಜಿ, ರಾಯಚೂರು ಉಪ ವಿಭಾಗದ ಸಹಾಯಕ ಆಯುಕ್ತೆ ಎನ್. ಮಂಜುಶ್ರೀ, ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಬಿಸನಳ್ಳಿ, ಡಿವೈಎಸ್ಪಿ ಡಾ. ದಿವ್ಯಾ ಗೋಪಿನಾಥ, ವಾರ್ತಾಧಿಕಾರಿ ಟಿ. ಕನುಮಪ್ಪ, ಯುನಿಸೆಫ್ ಅಧಿಕಾರಿ ರಾಘವೆಂದ್ರ ಭಟ್ ಮತ್ತಿತರರು ಇದ್ದರು.