ಮುದಗಲ್; ಜಂಪಿಂಗ್ ರಂಪಾಟ
ಮುದಗಲ್: ಸ್ಥಳೀಯ ಪಪಂಗೆ ನೂತನವಾಗಿ ಆಯ್ಕೆಯಾಗಿರುವ ಜೆಡಿಎಸ್ ಮತ್ತು ಬಿಎಸ್ ಆರ್ ಕಾಂಗ್ರೆಸ್ ಸದಸ್ಯರು ಕಾಂಗ್ರೆಸ್ಗೆ ಜಂಪಿಂಗ್ ಮಾಡಲು ಎರಡು ಗುಂಪುಗಳಲ್ಲಿ ರಂಪಾಟ ಆರಂಭವಾಗಿದೆ. ಜೆಡಿಎಸ್ ಸದಸ್ಯ ಮಾಜಿ ಶಾಸಕ ಮಾನಪ್ಪ ವಜ್ಜಲ್ ಕುಲಬಾಂಧವ ವಿರೇಶ ವಡ್ಡರ ತನ್ನ ಬೆಂಬಲಿಗ ಸದಸ್ಯರನ್ನು ಕರೆದುಕೊಂಡು ಕಾಂಗ್ರೆಸ್ ಸೇರಲು ಮುಖಂಡರ ಮೂಲಕ ಪ್ರಯತ್ನ ನಡೆಸಿದ್ದಾರೆನ್ನಲಾಗಿದೆ. ಇತ್ತ ಜೆಡಿಎಸ್ನಲ್ಲಿ ಎಲ್ಲವು ಸರಿ ಇಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಂಡಿರುವ ಎಪಿಎಂಸಿ ಉಪಾಧ್ಯಕ್ಷ ಮತ್ತವರ ಪತ್ನಿ ಸೇರಿ ಅವರ ಬೆಂಬಲಿಗ ಸದಸ್ಯರೊಂದಿಗೆ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ ಎಂದು ಪಟ್ಟಣದಲ್ಲಿ ಸುದ್ದಿ ಹಬ್ಬಿದೆ. ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರ ಹಿಡಿಯಲು ದಾರಿ ಸುಗಮವಾಗುತ್ತದೆ ಎನ್ನುವ ವಿಚಾರ ಇದ್ದುದರಿಂದ ಈ ರೀತಿ ಕಾಂಗ್ರೆಸ್ ಸೇರಲು ಪ್ರಯತ್ನ ನಡೆದಿದೆ. ಆದರೆ ಪಪಂ ಚುನಾವಣೆಯಲ್ಲಿ ಜಿದ್ದಾಜಿದ್ದಿ ಚುನಾವಣೆ ಎದುರಿಸಿ ಸೋಲು ಅನುಭವಿಸಿದ ಕಾಂಗ್ರೆಸ್ ಮುಖಂಡರು ವಿರೇಶ ವಡ್ಡರ ಮತ್ತು ಉಳಿದ ಜೆಡಿಎಸ್ ಸದಸ್ಯರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದು, ಅವರು ಪಕ್ಷ ಸೇರಿದರೆ ತಾವು ಪಕ್ಷ ತೊರೆಯುವುದಾಗಿ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.