ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ರಾಯಚೂರು ನಗರ ಕ್ಷೇತ್ರ: ನಾಲ್ಕು ನಾಮಪತ್ರ ತಿರಸ್ಕೃತ

Rashmi Kasaragodu
Updated On : 20 Apr 2013, 11:37 am

ರಾಯಚೂರು: ನಗರ ಕ್ಷೇತ್ರಕ್ಕೆ ಮೇ 5ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯ ನಾಮಪತ್ರಗಳ ಪರಿಶೀಲನೆ ಕಾರ್ಯ ಶುಕ್ರವಾರ ನಡೆದು ಒಟ್ಟು ನಾಲ್ಕು ನಾಮಪತ್ರಗಳು ತಿರಸ್ಕೃತಗೊಂಡಿವೆ.
ಪಕ್ಷೇತರರಾದ ಮಹಾದೇವ, ಕರಿಯಪ್ಪ, ಸೈಯದ್ ಖೈಸರ್ ಹುಸೇನ್ ಮತ್ತು ರಮೇಶ್ ಎಂಬುವವರ ನಾಮಪತ್ರಗಳನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದಾರೆ. ನಗರ ಕ್ಷೇತ್ರಕ್ಕೆ ಒಟ್ಟು 31 ಅಭ್ಯರ್ಥಿಗಳು 45 ನಾಮಪತ್ರಗಳನ್ನು ಸಲ್ಲಿಸಿದ್ದರು.
ಈ ಬಗ್ಗೆ ನಾಮಪತ್ರಗಳ ಪರಿಶೀಲನೆ ಕಾರ್ಯವು ಗುರುವಾರ ನಿಗದಿಯಾಗಿತ್ತು. ಆದರೆ ಬಿಜೆಪಿ ಅಭ್ಯರ್ಥಿ ತ್ರಿವಿಕ್ರಮ್ ಜೋಷಿ ಅವರು ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಯಾಸೀನ್ ಅವರ ಆಸ್ತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ನಾಮಪತ್ರಗಳ ಪರಿಶೀಲನೆ ಕಾರ್ಯವನ್ನು ಶುಕ್ರವಾರಕ್ಕೆ ಮಂದೂಡಲಾಗಿತ್ತು. ನಾಮಪತ್ರಗಳ ಪರಿಶೀಲನೆ ಕಾರ್ಯದ ನಂತರದಲ್ಲಿ ರಾಯಚೂರು ನಗರ ಕ್ಷೇತ್ರದಲ್ಲಿ ಸದ್ಯ 27 ಅಭ್ಯರ್ಥಿಗಳು ಕಣದಲ್ಲಿದ್ದು, ಏ.20 ನಾಮಪತ್ರಗಳ ಹಿಂತೆಗೆತಕ್ಕೆ ಕಡೆ ದಿನವಾಗಿದೆ.
ಧಾರ್ಮಿಕ ಸ್ಥಳ ಬಳಕೆಗೆ ನಿಷೇಧ
ರಾಯಚೂರು: ವಿಧಾನಸಭೆ ಚುನಾವಣೆಯ ನೀತಿ ಸಂಹಿತೆಯ ಅನ್ವಯ ರಾಜಕೀಯ ಪಕ್ಷಗಳು ದೇವಸ್ಥಾನ, ಮಂದಿರ, ಗುಡಿ,  ಚರ್ಚ್, ಮಸೀದಿಯಂಥ ಧಾರ್ಮಿಕ ಸ್ಥಳಗಳನ್ನು ಚುನಾವಣೆ ಕಾರ್ಯಕ್ಕೆ ಬಳಸುವಂತಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್ ಎಚ್ಚರಿಸಿದ್ದಾರೆ. ಈ ನಿಟ್ಟಿನಲ್ಲಿ ನಿಯಮ ಉಲ್ಲಂಘಿಸಿದರೆ ಅಂಥ ಪಕ್ಷದವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತದೆ. ಯಾವುದೇ ಗುತ್ತಿಗೆದಾರ, ವ್ಯಕ್ತಿ, ಪಂಗಡ ಅಥವಾ ಪಕ್ಷದಿಂದ ಹೊಸ ಕೊಳವೆಬಾವಿ ಕೊರೆಯಿಸುವುದು, ಪರವಾನಿಗೆ ಇಲ್ಲದೇ ಹೊಸ ಕಾಮಗಾರಿಗಳನ್ನು ನೇರ ಅಥವಾ ಪರೋಕ್ಷವಾಗಿ ಕೈಗೊಳ್ಳುವಂತಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. ಚುನಾವಣೆ ಮುಕ್ತ, ನ್ಯಾಯಸಮ್ಮತ, ಶಾಂತಿಯುತವಾಗಿ ನಡೆಸಲು ಜಿಲ್ಲೆಯ ಎಲ್ಲ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕೇಟರಿಂಗ್ ಮತ್ತು ಖಾನಾವಳಿ ಸೇವೆ ಒದಗಿಸುವವರು ಸಾಮೂಹಿಕ ಊಟದ ವ್ಯವಸ್ಥೆ ಮಾಡುವಂತಿಲ್ಲ. ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಲು ಶಾಮಿಯಾನಾ, ಮೈಕ್, ಸೌಂಡ್ ಸಿಸ್ಟಂ ಸರಬರಾಜು ಮಾಡುವವರು ಯಾವುದೇ ಸೇವೆಗಳನ್ನು ನೀಡುವ ಮುನ್ನ ಶಾಸನಬದ್ಧ ಸಂಸ್ಥೆಯಿಂದ ಪರವಾನಿಗೆ ಪಡೆದುಕೊಳ್ಳಬೇಕು.  ಈ ಸೂಚನೆ ಉಲ್ಲಂಘಿಸಿದರೆ ಸರಬರಾಜುದಾರರ ವಿರುದ್ಧ ಕ್ರಮ ಕೈಗೊಂಡು ಸಾಮಗ್ರಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಅಧಿಕಾರಿಗಳಿಗೆ ತರಬೇತಿ
ಲಿಂಗಸ್ಗೂರು: ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೆಕ್ಟ್ರಲ್ ಅಧಿಕಾರಿಗಳಿಗೆ ಶುಕ್ರವಾರ ಮತಯಂತ್ರಗಳ ಕುರಿತು ತರಬೇತಿ ನೀಡಲಾಯಿತು. ಲಿಂಗಸ್ಗೂರು ಚುನಾವಣಾ ವೀಕ್ಷಕ ರಾಜೇಂದ್ರ ಪ್ರಸಾದ ಓಜಾ, ಮಸ್ಕಿ ಚುನಾವಣಾ ವೀಕ್ಷಕ ಮೋಟ್ಸತುಂಗ್ ಪಠಾನ್, ಲಿಂಗಸ್ಗೂರು ಚುನಾವಣಾಧಿಕಾರಿ ಟಿ.ಯೋಗೇಶ, ಮಸ್ಕಿ ಚುನಾವಣಾಧಿಕಾರಿ ವೈ.ಬಿ. ಶ್ರೀನಿವಾಸ, ಉಪನ್ಯಾಸಕರಾದ ಜಿ.ವಿ.ಕೆಂಚನಗುಡ್ಡ, ಚಂದ್ರಶೇಖರಗೌಡ ಸೇರಿದಂತೆ ಚುನಾವಣಾ ಸೆಕ್ಟ್ರಲ್ ಅಧಿಕಾರಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement