ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸುಳ್ಳು ಸಾಕ್ಷಿದಾರರ ವಿರುದ್ಧ ಕೇಸ್ಗೆ ಕೋರ್ಟ್ ಸೂಚನೆ

Rashmi Kasaragodu
Updated On : 20 Apr 2013, 11:36 am

ರಾಯಚೂರು: ಮಾನವಿಯಲ್ಲಿ ಲಂಚ ಸ್ವೀಕರಿಸಿದ ಆರೋಪ ಎದುರಿಸುತ್ತಿದ್ದ ಅಧಿಕಾರಿಯ ವಿರುದ್ಧ ದೂರು ದಾಖಲಿಸಿದವರು ಮತ್ತು ಸಾಕ್ಷಿದಾರರು ಸುಳ್ಳು ಸಾಕ್ಷಿ ಹೇಳಿದ್ದಕ್ಕೆ ಇಲ್ಲಿನ ನ್ಯಾಯಾಲಯವು ಕೇಸ್ ದಾಖಲಿಸಲು ಸೂಚಿಸಿದೆ.
ಮಾನವಿ ಪಟ್ಟಣದಲ್ಲಿ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶಂಕರ್ ಗುಳೇದಗುಡ್ಡ ಅವರು ಗುಡದಿನ್ನಿಯ ಮಲ್ಲಯ್ಯ ಎಂಬುವವರಿಂದ ಅವರ ಎಮ್ಮೆಯ ಶವಪರೀಕ್ಷೆಯ ವರದಿ ನೀಡಲು 800 ಲಂಚ ಕೇಳಿದ್ದರು. ಆ ಬಗ್ಗೆ ಮಲ್ಲಯ್ಯ ಲೋಕಾಯುಕ್ತರಿಗೆ ದೂರಿತ್ತಿದ್ದರು. ಡಾ. ಶಂಕರ್ ಗುಳೇದಗುಡ್ಡ ಅವರು ಮಲ್ಲಯ್ಯ ಅವರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ಮಾಡಿದ್ದ ಲೋಕಾಯುಕ್ತರು ಕೇಸ್ ದಾಖಲಿಸಿದ್ದರು.
ಈ ಕುರಿತು ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ದೂರುದಾರ ಮಲ್ಲಯ್ಯ ಹಾಗೂ ಮತ್ತೊಬ್ಬ ಸಾಕ್ಷಿದಾರ ರೇಷ್ಮೆ ಇಲಾಖೆಯ ಗುಮಾಸ್ತ ಜಿ. ಗೋಪಾಲ್  ಸುಳ್ಳು ಸಾಕ್ಷಿ ಹೇಳಿದ್ದರಿಂದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್.ಎಚ್. ಮಿಟ್ಟಲಕೋಡ್ ಅವರು ಸಾಕ್ಷಿದಾರ ಮತ್ತು ದೂರುದಾರನ ವಿರುದ್ಧ ಸುಳ್ಳು ಸಾಕ್ಷಿ ಹೇಳಿದ್ದಕ್ಕೆ ಪ್ರಕರಣ ದಾಖಲಿಸುವಂತೆ ಲೋಕಾಯುಕ್ತರಿಗೆ ಸೂಚಿಸಿದರೆಂದು ಲೋಕಾಯುಕ್ತ ಎಸ್ಪಿ ಎಸ್.ಬಿ. ಪಾಟೀಲ್ ತಿಳಿಸಿದ್ದಾರೆ.
ಅಕ್ರಮ ಮದ್ಯ: ಮಹಿಳೆ ಬಂಧನ
ರಾಯಚೂರು: ತಾಲೂಕಿನ ಜೇಗರಕಲ್ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಬಂಧಿಸಲಾಗಿದೆ. ಬಂಧಿತಳನ್ನು ಮಾರೆಮ್ಮ ಎಂದು ಗುರುತಿಸಲಾಗಿದೆ. ಈಕೆ ಗ್ರಾಮದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ಮಾಡಿದ ಅಬಕಾರಿ ಪೊಲೀಸರು ವಿವಿಧ ಕಂಪನಿಗಳ ಸುಮಾರು ರು. 2393 ಬೆಲೆಯ ಮದ್ಯ ಜಪ್ತಿ ಮಾಡಿದ್ದಾರೆ. ಈ ಕುರಿತು ಅಬಕಾರಿ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಕ್ರೂಸರ್ ಡಿಕ್ಕಿ: ಮಹಿಳೆ ಸಾವು
ರಾಯಚೂರು: ಲಿಂಗಸ್ಗೂರು ತಾಲೂಕಿನ ರೋಡಲಬಂಡಾ ಕ್ರಾಸ್ ನಿಂದ ಅನ್ವರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದಾಗ ಕ್ರೂಸರ್ ಡಿಕ್ಕಿಯಾಗಿ ಮಹಿಳೆ ಸಾವಿಗೀಡಾಗಿದ್ದಾಳೆ. ಮೃತಳನ್ನು ನಾಗರತ್ನಮ್ಮ ಎಂದು ಗುರುತಿಸಲಾಗಿದೆ. ಈಕೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಕ್ರೂಸರ್ ಬೈಕ್ಗೆ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಹಟ್ಟಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಜಕ್ಕೇರಮಡು ಗದ್ದೆಮ್ಮದೇವಿ ಜಾತ್ರೆ
ಮುದಗಲ್: ಜಕ್ಕೆರಮಡು ಗ್ರಾಮದ ಆರಾಧ್ಯ ದೇವರಾದ ಗದ್ದೆಮ್ಮ ದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಅತ್ಯಂತ ಸಂಭ್ರದಿಂದ ಜರುಗಿತು. ಜಾತ್ರೆ ಅಂಗವಾಗಿ ಗ್ರಾಮ ದೇವತೆ ಮೂರ್ತಿಯನ್ನು ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement