ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

332 ಅತೀ ಸೂಕ್ಷ್ಮ, 542 ಸೂಕ್ಷ್ಮ ಮತಗಟ್ಟೆ: ಜಿಲ್ಲಾಧಿಕಾರಿ

Rashmi Kasaragodu
Updated On : 21 Apr 2013, 2:03 am

ಕನ್ನಡಪ್ರಭ ವಾರ್ತೆ, ರಾಯಚೂರು, ಏ.20
ಜಿಲ್ಲೆಯಲ್ಲಿ ಮೇ 5ರಂದು ನಡೆಯಲಿರುವ 7 ವಿಧಾನಸಭೆ ಕ್ಷೇತ್ರಗಳ ಚುನಾವಣೆಗೆ ಒಟ್ಟು 1,549 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಅದರಲ್ಲಿ 332 ಅತೀ ಸೂಕ್ಷ್ಮ, 542 ಸೂಕ್ಷ್ಮ ಹಾಗೂ 675 ಸಾಮಾನ್ಯ ಮತಗಟ್ಟೆಗಳಿರಲಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಉಜ್ವಲ್ ಕುಮಾರ್ ಘೋಷ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ 221 ಮತಗಟ್ಟೆಗಳ ಪೈಕಿ 49 ಅತೀ ಸೂಕ್ಷ್ಮ, 75 ಸೂಕ್ಷ್ಮ ಮತಗಟ್ಟೆಗಳಿರುತ್ತವೆ. ರಾಯಚೂರು ನಗರ ಕ್ಷೇತ್ರದಲ್ಲಿ 192 ಮತಗಟ್ಟೆಗಳ ಪೈಕಿ 44 ಅತೀ ಸೂಕ್ಷ್ಮ, 66 ಸೂಕ್ಷ್ಮ ಮತಗಟ್ಟೆಗಳಿರುತ್ತವೆ ಎಂದು ಹೇಳಿದರು.
ಮಾನವಿ ಕ್ಷೇತ್ರದಲ್ಲಿ 235 ಮತಗಟ್ಟೆಗಳಿರಲಿದ್ದು, ಅವುಗಳ ಪೈಕಿ 49 ಅತೀ ಸೂಕ್ಷ್ಮ, 84 ಸೂಕ್ಷ್ಮ ಮತಗಟ್ಟೆಗಳಿರುತ್ತವೆ. ದೇವದುರ್ಗ ಕ್ಷೇತ್ರದಲ್ಲಿ 228 ಮತಗಟ್ಟೆಗಳಲ್ಲಿ 48 ಅತೀ ಸೂಕ್ಷ್ಮ, 80 ಸೂಕ್ಷ್ಮ, ಲಿಂಗಸ್ಗೂರು ಕ್ಷೇತ್ರದಲ್ಲಿ 236 ಮತಗಟ್ಟೆಗಳಲ್ಲಿ 49 ಅತೀ ಸೂಕ್ಷ್ಮ, 83 ಸೂಕ್ಷ್ಮ ಮತಗಟ್ಟೆಗಳು, ಸಿಂಧನೂರು ಕ್ಷೇತ್ರದಲ್ಲಿ 233 ಮತಗಟ್ಟೆಗಳ ಪೈಕಿ 49 ಅತೀ ಸೂಕ್ಷ್ಮ, 82 ಸೂಕ್ಷ್ಮ ಮತಗಟ್ಟೆಗಳಿರುತ್ತವೆ ಎಂದು ತಿಳಿಸಿದ ಅವರು, ಮಸ್ಕಿ ಕ್ಷೇತ್ರದಲ್ಲಿ 204 ಮತಗಟ್ಟೆಗಳ ಪೈಕಿ 44 ಅತೀ ಸೂಕ್ಷ್ಮ, 72 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದು ಹೇಳಿದರು.
ಸಿಆರ್‌ಪಿಎಫ್ ಪಡೆ ನಿಯೋಜನೆ: ಅತೀ ಸೂಕ್ಷ್ಮ ಮತಗಟ್ಟೆಗಳು ಸೇರಿದಂತೆ ಶಾಂತಿಯುತ, ಸುಗಮ ಮತದಾನಕ್ಕಾಗಿ ಕೇಂದ್ರದ ಮೀಸಲು ಪೊಲೀಸ್ ಪಡೆಗಳನ್ನು ನಿಯೋಜಿಸಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ 491 ರೌಡಿ ಶೀಟರ್‌ಗಳನ್ನು ಗುರುತಿಸಿ ಮುಚ್ಚಳಿಕೆ ಬರೆಯಿಸಿಕೊಳ್ಳಲಾಗಿದೆ. ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ 60, ರಾಯಚೂರು ನಗರದಲ್ಲಿ 116, ಮಾನವಿಯಲ್ಲಿ 79, ದೇವದುರ್ಗದಲ್ಲಿ 64, ಲಿಂಗಸ್ಗೂರಿನಲ್ಲಿ 53, ಸಿಂಧನೂರಿನಲ್ಲಿ 72 ಹಾಗೂ ಮಸ್ಕಿಯಲ್ಲಿ 47 ಜನ ಅಪರಾಧ ಹಿನ್ನೆಲೆಯ ವ್ಯಕ್ತಿಗಳನ್ನು ಗುರುತಿಸಿ ಸನ್ನಡತೆಯ ಮುಚ್ಚಳಿಕೆ ಬರೆಯಿಸಿಕೊಳ್ಳಲಾಗಿದೆ ಎಂದು ಹೇಳಿದರು.
7,295 ಸಿಬ್ಬಂದಿ: ಜಿಲ್ಲೆಯಲ್ಲಿ ಮತದಾನಕ್ಕಾಗಿ ಈಗಾಗಲೇ 7,295 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 1,412 ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಮತದಾನದ ದಿನ 192 ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಬಳಕೆ ಮಾಡಲಾಗುತ್ತದೆ. ಅದೇ ರೀತಿ 34 ಮಿನಿ ಬಸ್‌ಗಳು, 68 ಮ್ಯಾಕ್ಸಿಕ್ಯಾಬ್‌ಗಳು ಹಾಗೂ 40 ಜೀಪ್‌ಗಳನ್ನು ಬಳಸಲಾಗುತ್ತದೆ ಎಂದು ತಿಳಿಸಿದರು.
ಮತದಾನದ ವೇಳೆ ಅಕ್ರಮ ತಡೆಗೆ ಜಿಲ್ಲಾಡಳಿತವು ಮುಂಜಾಗ್ರತೆ ಕ್ರಮವಾಗಿ ಮತದಾನದ ದಿನ ಮೇ 5ರಂದು ಎಲ್ಲ ಖಾಸಗಿ ವಾಹನಗಳ ಸಂಚಾರ ನಿಷೇಧಿಸಲಿದೆ. ಈ ನಿಟ್ಟಿನಲ್ಲಿ ಪರವಾನಗಿಯಿಲ್ಲದೇ ಸಂಚರಿಸುವ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗುತ್ತದೆ. ಈ ಮೂಲಕ ಮತದಾರರ ಸಾಗಣೆಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.
ಒಂದು ದಿನ ಮುಂಚೆ ಚೀಟಿ: ಮತದಾರರಿಗೆ ಮತಚೀಟಿಯನ್ನು ಮತದಾನದ ದಿನಕ್ಕಿಂತ ಒಂದು ವಾರ ಮುಂಚೆಯೇ ಆಯಾ ಪ್ರದೇಶದ ಬಿಎಲ್‌ಒಗಳು ಮನೆ ಮನೆಗೆ ತೆರಳಿ ವಿತರಿಸಲಿದ್ದಾರೆ. ಈ ಕಾರ್ಯಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ಗ್ರಾಪಂ ಸಿಬ್ಬಂದಿ ಮತ್ತು ನಗರ ಪ್ರದೇಶದಲ್ಲಿ  ಪುರಸಭೆ, ನಗರಸಭೆಯ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದ್ದು, ಹೆಸರು ಸೇರ್ಪಡೆಗೆ ಒಟ್ಟು 57,585 ಅರ್ಜಿಗಳು ಸಲ್ಲಿಕೆಯಾಗಿವೆ. ಹೆಸರು ತೆಗೆದು ಹಾಕಲು 25,200 ಅರ್ಜಿಗಳು ಬಂದಿವೆ. ಅದೇ ರೀತಿ ಮತದಾರರ ಯಾದಿಯಲ್ಲಿನ ತಿದ್ದುಪಡಿಗೆ ಕೋರಿ 8,604 ಅರ್ಜಿಗಳು ಬಂದಿವೆ ಎಂದು ಜಿಲ್ಲಾಧಿಕಾರಿ ಘೋಷ್ ತಿಳಿಸಿದರು.
ಅಕ್ರಮ ಮದ್ಯ ಕಡಿವಾಣಕ್ಕೆ ಕ್ರಮ: ಜಿಲ್ಲೆಯಲ್ಲಿ ಪ್ರಸಕ್ತ ಚುನಾವಣೆಯ ಹಿನ್ನೆಲೆಯಲ್ಲಿ ಮದ್ಯದ ನಿಗದಿಗಿಂತ ಹೆಚ್ಚಿನ ಮಾರಾಟದ ಮೇಲೆ ನಿಗಾಯಿರಿಸಲು ಅಬಕಾರಿ ಇಲಾಖೆಗೆ ಸೂಚಿಸಲಾಗಿದೆ. ಅಕ್ರಮ ಮದ್ಯ ಸಾಗಣೆಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ.
ನೋಟಿಸ್ ಜಾರಿ: ಲಿಂಗಸ್ಗೂರು ನಗರದಲ್ಲಿ ಕರ್ನಾಟಕ ಬ್ಯಾಂಕ್ ನೂತನ ಶಾಖೆಯ ಉದ್ಘಾಟನೆಗೆ ಹಾಲಿ ಜೆಡಿಎಸ್ ಅಭ್ಯರ್ಥಿ ಮಾನಪ್ಪ ವಜ್ಜಲ್ ಅವರನ್ನು ಆಹ್ವಾನಿಸಿದ ಬ್ಯಾಂಕ್ ಅಧಿಕಾರಿಗಳಿಗೆ ಮತ್ತು ವಜ್ಜಲ್ ಅವರಿಗೆ ನೀತಿ ಸಂಹಿತೆಯ ಉಲ್ಲಂಘನೆ ಹಿನ್ನೆಲೆ ನೋಟಿಸ್ ಜಾರಿ ಮಾಡಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಬಿಸನಳ್ಳಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement