ಅಗ್ನಿ ಸಮಾಧಿ ಪ್ರಕರಣ: ಸಿಬಿಐ ತನಿಖೆಗೆ ಆಗ್ರಹ
ಗುಲ್ಬರ್ಗ: ಬೀದರ್ ಜಿಲ್ಲೆಯ ಚೌಳಿ ಮಠದ ಸ್ವಾಮೀಜಿಗಳ ಹಾಗೂ ಹಿರಿಯ ಶ್ರೀಗಳಾದ ಗಣೇಶ್ವರ ಅವಧೂತರ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಜಿಲ್ಲಾ, ತಾಲೂಕು ಘಟಕಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ.
ಇಡೀ ಮನುಕುಲದ ಊಹೆಯನ್ನೇ ಮೀರಿ ಇತ್ತೀಚೆಗೆ ಮೂವರು ಕಿರಿಯ ಸ್ವಾಮೀಜಿಗಳು ಸ್ವ-ಇಚ್ಛೆಯಿಂದ ಆತ್ಮಾಹುತಿ ಮಾಡಿಕೊಂಡಿರುವುದು ಈಡೀ ನಾಡನ್ನು ದಂಗುಬಡಿಸಿದೆ. ಅಲ್ಲದೇ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದರು.
ಹಲವು ಶಂಕೆ: ಫೆ.28ರಂದು ಚೌಳಿಮಠದ ಹಿರಿಯ ಶ್ರೀಗಳಾದ ಗಣೇಶ್ವರ ಅವಧೂತ ಸ್ವಾಮೀಜಿ ನಿಗೂಢ ಸಾವಿಗೆ ಶರಣಾಗಿರುವುದು ಭಕ್ತರ ಮನದಲ್ಲಿ ಇನ್ನೂ ಹಸಿರಾಗಿರುವಾಗಲೇ ಮತ್ತೊಂದು ಇಂತಹ ದುರ್ಘಟನೆ ನಡೆದಿರುವುದು ದುರದೃಷ್ಟಕರ. ಹಿರಿಯ ಶ್ರೀಗಳ ಸಾವಿನಿಂದ ಮನನೊಂದ ವೀರಾರೆಡ್ಡಿ ಸ್ವಾಮಿ, ಜಗನ್ನಾಥ ಸ್ವಾಮಿ ಹಾಗೂ ಪ್ರಣವ್ ಸ್ವಾಮಿ ಏ.8ರಂದು ಬೆ.5 ಗಂಟೆ ಸುಮಾರಿಗೆ ಚಿತೆಗೆ ಹಾರಿ ಆತ್ಮಾಹುತಿ ಮಾಡಿಕೊಂಡಿರುವುದು ಹಲವು ಅನಮಾನಗಳಿಗೆ ಎಡೆಮಾಡಿದೆ ಎಂದು ಮುಖಂಡರು ಅಭಿಪ್ರಾಯಪಟ್ಟರು.
ಹಿರಿಯ ಶ್ರೀಗಳ ಸಾವು ಅನೇಕ ಅನುಮಾನಗಳಿಗೆ ಕಾರಣವಾಗಿತ್ತು. ಬೆದರಿಕೆಯ ಕರೆಗಳು ಬರುತ್ತಿದ್ದವು ಎಂದು ಹೇಳಲಾಗಿತ್ತು. ತನಿಖೆಗೆ ಆದೇಶಿಸಲಾಗಿದ್ದರೂ ಯಾವುದೇ ರಹಸ್ಯ ಭೇದಿಸುವಲ್ಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆಂದು ಆರೋಪಿಸಿದರು.
ನ್ಯಾಯ ದೊರಕಿಸಲು ಆಗ್ರಹ: ಸಾವಿಗೆ ಶರಣಾಗಿರುವ ಕಿರಿಯ ಶ್ರೀಗಳಿಗೆ ಕೂಡ ಬೆದರಿಕೆಯ ಕರೆಗಳು ಬರುತ್ತಿದ್ದವು ಎಂದು ಹೇಳಲಾಗುತ್ತಿದೆ. ಆದ್ದರಿಂದ ಹಿರಿಯ ಮತ್ತು ಕಿರಿಯ ಸ್ವಾಮಿಗಳ ಸಾವಿನ ಬಗ್ಗೆ ಸಿಬಿಐ ನಂತಹ ಉನ್ನತಮಟ್ಟದ ತನಿಖಾ ಸಂಸ್ಥೆಗಳಿಂದ ತನಿಖೆ ನಡೆಸಿ ಶ್ರೀಮಠಕ್ಕೆ ಹಾಗೂ ಭಕ್ತರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ ಬಿರನೂರ, ಸಂಪತ್ ಬಿಜಾಪುರೆ, ಗೋಪಾಲ್ ಎನ್.ನಾಟೀಕರ್, ಜಿ.ಶಿವಶಂಕರ, ಸಂತೋಷ ಚೌಧರಿ, ಶರಣು ಹೊಸಮನಿ, ಶಂಭುಲಿಂಗ ಶಾಬಾದಕರ್, ಅಭಿಷೇಕ, ನಿಜಲಿಂಗ ಮಠಪತಿ ಇದ್ದರು.