'ಬಿಜೆಪಿ ಸರ್ಕಾರದಿಂದ ಅಭಿವೃದ್ಧಿಗೆ ಹಿನ್ನಡೆ'
ದೇವದುರ್ಗ: ರಾಜ್ಯದಲ್ಲಿ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರವು ಭ್ರಷ್ಟಾಚಾರ ನಡೆಸಿದ್ದರಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.
ತಾಲೂಕಿನ ಜಾಲಹಳ್ಳಿಯಲ್ಲಿ ಶನಿವಾರ ಸಂಜೆ ಕಾಂಗ್ರೆಸ್ ಅಭ್ಯರ್ಥಿ ವೆಂಕಟೇಶ್ ನಾಯಕ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪರ ಅಲೆಯಿದೆ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಹೇಳಿದರು. ರಾಜ್ಯದ ಜನತೆ ಕಾಂಗ್ರೆಸ್‌ಗೆ ಬಹುಮತ ನೀಡಿದಲ್ಲಿ ಎಲ್ಲ ಭ್ರಷ್ಟರನ್ನೂ ಜೈಲಿಗೆ ಕಳಿಸುವುದಾಗಿ ತಿಳಿಸಿದ ಅವರು, ಹೈ-ಕ ಭಾಗದ ಜನತೆಗೆ ಕೇಂದ್ರ ಸರ್ಕಾರ 371ನೇ ಕಲಂ (ಜೆ) ಜಾರಿಗೆ ತರುವ ಮೂಲಕ ಅಭಿವೃದ್ಧಿಗೆ ನಾಂದಿ ಹಾಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮತ್ತು ಬಿಜೆಪಿ ತೊರೆದ ಡಾ. ನೂರುದ್ದೀನ್, ದುರಗಣ್ಣ ಊಟಿ, ತಿಮ್ಮಾರಡ್ಡಿ ಪಾಟೀಲ್ ಬುಂಕಲದೊಡ್ಡಿ, ದ್ಯಾವಪ್ಪ ಗೋರ್ಲಿ, ಪರಮಣ್ಣ, ವೆಂಕಟೇಶ, ಸೇರಿ ಅನೇಕರು ಕಾಂಗ್ರೆಸ್ ಸೇರಿದರು.
ಮಾಜಿ ಸಚಿವ ಸಗೀರ್ ಅಹ್ಮದ್, ಪಕ್ಷದ ಜಿಲ್ಲಾ ಅಧ್ಯಕ್ಷ ಎ.ವಸಂತಕುಮಾರ, ಕಾಂಗ್ರೆಸ್ ಅಭ್ಯರ್ಥಿ ಎ.ವೆಂಕಟೇಶ ನಾಯಕ, ಮಾಜಿ ಎಂಲ್‌ಸಿ ಬಸವರಾಜ ಪಾಟೀಲ್ ಇಟಗಿ, ಬಿ.ವಿ. ನಾಯಕ, ಜಿಪಂ ಮಾಜಿ ಅಧ್ಯಕ್ಷ ರಾಮಣ್ಣ ಇರಬಗೇರಾ, ಬುಡ್ಡನಗೌಡ ಜಾಗಟಕಲ್ ಸೇರಿದಂತೆ ಅನೇಕರಿದ್ದರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಮಾವೇಶದಲ್ಲಿದ್ದರು.