ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ, ರಾಯಚೂರು, ಏ.20
ವಿಧಾನಸಭಾ ಚುನಾವಣೆಯ ಹಿನ್ನೆಲೆ ನಗರದಲ್ಲಿ ಶನಿವಾರ ಮತದಾರರ ಜಾಗೃತಿಗೆ ಇಲ್ಲಿನ ಬಿಇಡಿ ಮತ್ತು ಡಿಇಡಿ ಕಾಲೇಜುಗಳು ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ಆಯೋಜಿಸಲಾಗಿತ್ತು.
ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಸಹಾಯಕ ಆಯುಕ್ತೆ ಮಂಜುಶ್ರೀ ಅವರು, ಪೂರ್ಣ ಪ್ರಮಾಣದಲ್ಲಿ ಮತದಾನ ಮಾಡುವಂತೆ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗಟ್ಟಿಗೊಳಿಸಬೇಕು ಎಂದು ಕರೆ ನೀಡಿದರು.
ಮತದಾನ ಎಲ್ಲರ ಹಕ್ಕು. ಅದನ್ನು ಮುಕ್ತವಾಗಿ ಚಲಾಯಿಸಬೇಕು. ಜಿಲ್ಲೆಯ ಆಯ್ದ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಬೀದಿ ನಾಟಕ, ಬ್ಯಾನರ್, ಪೋಸ್ಟರ್ ಅಳವಡಿಕೆ, ಕರಪತ್ರ ವಿತರಣೆ, ಮಹಿಳಾ ಸಂಘಗಳು, ನೋಂದಾಯಿತ ಯುವಕ- ಯುವತಿ ಮಂಡಳಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಲು ಶ್ರಮಿಸುತ್ತಿದ್ದಾರೆಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲ ಮತದಾರರು ಮತದಾನ ಮಾಡಿ ಶೇಕಡಾವಾರು ಮತದಾನ ಹೆಚ್ಚಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪವಿತ್ರವಾದ ಹಕ್ಕು ಚಲಾಯಿಸುವಂತೆ ಚುನಾವಣಾ ಆಯೋಗವು ಶ್ರಮಿಸುತ್ತಿದೆ ಎಂದರು.
ಈ ಸಂದರ್ಭ ಜಾಗೃತಿ ಜಾಥಾವು ಮಹಾವೀರ ಚೌಕದಲ್ಲಿ ಮಾನವ ಸರಪಳಿ ನಿರ್ಮಿಸಿ ಘೋಷಣೆ ಕೂಗಲಾಯಿತು. ಯುನಿಸೆಫ್ ಅಧಿಕಾರಿ ರಾಘವೇಂದ್ರ ಭಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ಡಯಟ್ ಕಾಲೇಜು ಹಿರಿಯ ಉಪಾನ್ಯಾಸಕ ಸಿ.ಬಿ. ಹೀರೆಮಠ, ವಿವಿಧ ಬಿಇಡಿ ಮತ್ತು ಡಿಇಡಿ ಕಾಲೇಜು ಪ್ರಾಚಾರ್ಯರು, ವಿದ್ಯಾರ್ಥಿಗಳು ಇದ್ದರು.