ಸಂಹಿತೆ ಉಲ್ಲಂಘನೆ: 41 ಪ್ರಕರಣ ದಾಖಲು
ರಾಯಚೂರು: ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇದುವರೆಗೆ ನೀತಿ ಸಂಹಿತೆ ಉಲ್ಲಂಘನೆಯ ಒಟ್ಟು 41 ಪ್ರಕರಣ ದಾಖಲಿಸಲಾಗಿದೆ. ಅಕ್ರಮ ಮದ್ಯಕ್ಕೆ ಸಂಬಂಧಿಸಿದ 48 ಪ್ರಕರಣ ಹಾಗೂ ದಾಖಲೆಗಳಿಲ್ಲದ ಹಣ ಸಾಗಣೆಯ 11 ಪ್ರಕರಣ ದಾಖಲಿಸಲಾಗಿದೆ.
ನಗರದಲ್ಲಿ ಶನಿವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್ ಅವರು, ಇದುವರೆಗೆ ನೀತಿ ಸಂಹಿತೆ ಉಲ್ಲಂಘನೆಯ ಒಟ್ಟು 41 ಪ್ರಕರಣ ದಾಖಲಾಗಿವೆ. ಅತೀ ಹೆಚ್ಚು ಲಿಂಗಸ್ಗೂರು ಕ್ಷೇತ್ರದಲ್ಲಿ 11 ಪ್ರಕರಣ ದಾಖಲಾಗಿವೆ ಎಂದು ತಿಳಿಸಿದರು.
ಅದೇ ರೀತಿ ಅಕ್ರಮ ಮದ್ಯ ಸಾಗಣೆ ಮತ್ತು ಸಂಗ್ರಹಣೆ ಮೇಲೆ ದಾಳಿ ನಡೆಸಿ ಒಟ್ಟು 48 ಕೇಸ್ಗಳಲ್ಲಿ ಒಂದು ಸಾವಿರ ವಿವಿಧ ಕಂಪನಿಗಳ ಮದ್ಯ ಹಾಗೂ 1,630 ಕೇಸ್ ಇತರೆ ಮದ್ಯವನ್ನು ಜಪ್ತಿ ಮಾಡಿದ್ದು, ಇದರ ಬೆಲೆ 9,35,403 ಆಗಿದೆ. ಈ ಕುರಿತಂತೆ 28 ಜನರನ್ನು ಈ ಕುರಿತು ಬಂಧಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ವಿವಿಧೆಡೆ ಚೆಕ್ ಪೋಸ್ಟ್ಗಳಲ್ಲಿ ವಾಹನಗಳ ತಪಾಸಣೆ ವೇಳೆ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 11 ಪ್ರಕರಣಗಳಲ್ಲಿ 39,17,700 ಪತ್ತೆಯಾಗಿದೆ. ಈ ಕುರಿತು 39 ಜನರನ್ನು ಬಂಧಿಸಲಾಗಿದೆ. ಸುಗಮ ಮತ್ತು ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.