ಹಂಪನಗೌಡ ಬಾದರ್ಲಿ ಚುನಾವಣೆ ಗಿಮಿಕ್; ಟೀಕೆ
ಸಿಂಧನೂರು: ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಇತ್ತೀಚೆಗೆ ಪತ್ರಿಕೆಯಲ್ಲಿ ಇದು ತಮ್ಮ ಕೊನೆಯ ಚುನಾವಣೆ ಎಂದು ಹೇಳಿಕೊಂಡಿದ್ದು ಇದು ಕೇವಲ ಅವರ ಚುನಾವಣೆ ಗಿಮಿಕ್ ಆಗಿದೆ ಎಂದು ಶಾಸಕ ವೆಂಕಟರಾವ್ ನಾಡಗೌಡ ಟೀಕಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಚಾರಕ್ಕೆ ಹೋದ ಕಡೆಗಳಲ್ಲೆಲ್ಲ ನನ್ನ ಆಡಳಿತದ ಬಗ್ಗೆ ಟೀಕಿಸುತ್ತಿರುವ ಹಂಪನಗೌಡರು ತಾವು ಎರಡು ಬಾರಿ ಶಾಸಕರಾಗಿ ಮಾಡಿದ್ದೇನು ಎಂಬ ಬಗ್ಗೆ ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜೆಡಿಎಸ್ ಪಕ್ಷಕ್ಕೆ ಹೆಚ್ಚು ಸೇರ್ಪಡೆಯಾಗುತ್ತಿದ್ದು ನನ್ನ ಐದು ವರ್ಷದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಜನರು ಮೆಚ್ಚಿದ್ದಾರೆಂದು ಹೆಮ್ಮೆ ಇದೆ ಎಂದರು. ಎಂ.ಡಿ. ಸಲೀಂ ಅಹ್ಮದ್‌ರನ್ನು ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರನ್ನಾಗಿ, ಫಾರೂಖ್ ಸಾಬ ಅವರನ್ನು ನಗರ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ಕೆ.ಜಿಲಾನಿಪಾಷ, ನಾಗೇಶ ಹಂಚಿನಾಳ, ವೆಂಕಟೇಶ ನಂಜಲದಿನ್ನಿ, ಸುಮಿತ್ ತಡಕಲ್, ಚಂದ್ರು ಜವಳಗೇರಾ ಮತ್ತಿತರರು ಉಪಸ್ಥಿತರಿದ್ದರು.