ಕುಡಿವ ನೀರಿಗಾಗಿ ಹಾಹಾಕಾರ
ಮುದಗಲ್: ಸಮೀಪದ ನಾಗಲಾಪೂರ ಗ್ರಾ.ಪಂ. ವ್ಯಾಪ್ತಿಯ ಪಿಕಳಿಹಾಳ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಮಹಿಳೆಯರು ಸರದಿಯಲ್ಲಿ ಕಾಯಬೇಕಾದ ಪರಸ್ಥಿತಿ ನಿರ್ಮಾಣವಾಗಿದೆ.
ನಾಗಲಾಪೂರ ಗ್ರಾ.ಪಂ.ಆಡಳಿತ ಕಿರುನೀರು ಸರಬರಾಜು ಯೋಜನೆ, ಎರಡು-ಮೂರು ಕೈ ಬೊರ್‌ವೆಲ್‌ಗಳು ಮೂಲಕ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಆದರೆ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಸಮಯಕ್ಕೆ ಸರಿಯಾಗಿ ವಿದ್ಯುತ್ ಮೋಟಾರು ಆರಂಭವಾಗಿ ನೀರಿನ ಗುಮ್ಮಿಗಳಿಗೆ ಸರಬರಾಜು ಆಗದ ಕಾರಣ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಅನುಭವಿಸುವಂತಾಗಿದೆ. ಮಹಿಳೆಯರು ನೀರಿನ ಗುಮ್ಮಿಗಳ ಮುಂದೆ ಖಾಲಿಕೊಡ ಹಿಡಿದು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈಗಾಗಲೇ ಜಿ.ಪಂ.ನ ಎನ್‌ಆರ್‌ಡಬ್ಲೂಪಿ ಯೋಜನೆಯಡಿ ಸುಮಾರು ರು. 20 ಲಕ್ಷಗಳಲ್ಲಿ ಬೊರವೆಲ್ ಕೊರೆಸಿ ಪೈಪ್‌ಲೈನ್ ಮಾಡಲಾಗಿದೆ. ಆದರೆ ಟ್ಯಾಂಕ್ ನಿರ್ಮಾಣ ಕಾಮಗಾರಿ ಬಾಕಿ ಉಳಿದಿರುವುದರಿಂದ ಯೋಜನೆ ಅರ್ಧಕ್ಕೆ ನಿಂತಿದೆ. ವಿದ್ಯುತ್ ಪೂರೈಕೆಯಾದರೆ, ಗ್ರಾಮದಲ್ಲಿ ದಿನ ಪೂರ್ತಿ ನೀರು ಸಿಗುತ್ತದೆ. ವಿದ್ಯುತ್ ಇಲ್ಲದಿದ್ದರೇ ಗ್ರಾಮಕ್ಕೆ ನೀರಿಲ್ಲ ಕೂಡಲೇ ಸಂಭಂದಿಸಿದ ಅಧಿಕಾರಿಗಳು ಗ್ರಾಮದ ಕಡೆ ಗಮನಹರಿಸಿ ನೀರು ಸರಬರಾಜಿಗೆ ಸೂಕ್ತ ಕ್ರಮ ಕೈಗೊಂಡು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.
--
ವೈದ್ಯಕೀಯ ವೆಚ್ಚ ವಿಳಂಬಕ್ಕೆ ನೌಕರರ ಸಂಘದ ಖಂಡನೆ
ರಾಯಚೂರು: ಜಿಲ್ಲೆಯಲ್ಲಿ ಸರ್ಕಾರಿ ನೌಕರರ ವೈದ್ಯಕೀಯ ವೆಚ್ಚ ಮರುಪಾವತಿ ಪ್ರಕರಣಗಳಿಗೆ ಸಂಬಂಧಿಸಿ ಇಲಾಖೆಗಳ ಮೇಲಧಿಕಾರಿಗಳು ಅನಗತ್ಯವಾಗಿ ವಿಳಂಬ ಮಾಡುವ ಮೂಲಕ ನಿಯಮಬಾಹಿರ ಆಕ್ಷೇಪಣೆಗಳನ್ನು ವ್ಯಕ್ತ ಮಾಡುತ್ತಿದ್ದಾರೆಂದು ಜಿಲ್ಲಾ ಸರ್ಕಾರಿ ನೌಕರರ ಸಂಘ ಆರೋಪಿಸಿದೆ. ಈ ಕುರಿತು ಜಿಪಂ ಸಿಇಒ ಅವರಿಗೆ ದೂರು ಸಲ್ಲಿಸಿ, ವೈದ್ಯಕೀಯ ವೆಚ್ಚಗಳನ್ನು ಮಾಡಿದ ನೌಕರನ ನೆರವಿಗೆ ಧಾವಿಸುವುದು ಅಧಿಕಾರಿಗಳ ಕಾರ್ಯವಾಗಬೇಕು. ಆದರೆ ಅನಗತ್ಯವಾಗಿ ಆಕ್ಷೇಪಣೆಗಳನ್ನು ವ್ಯಕ್ತಪಡಿಸುತ್ತಾ ನೌಕರರಿಗೆ ಪಾವತಿಯನ್ನು ಮಾಡುವಲ್ಲಿ ವಿಳಂಬ ಮಾಡುತ್ತಿದ್ದಾರೆಂದು ದೂರಿದ್ದಾರೆ. ಜೀವನಾಧಾರವಾಗಿ ವೇತನ ಅವಲಂಬಿಸಿರುವ ನೌಕರರು ಉದ್ಭವವಾಗುವ ವೈದ್ಯಕೀಯ ವೆಚ್ಚಗಳನ್ನು ಭರಿಸಲು ಮರುಪಾವತಿಯ ಅವಕಾಶ ಮಾಡಿಕೊಟ್ಟಿದೆ. ಆದರೆ ಕೆಲ ಇಲಾಖೆಗಳ ಮೇಲಧಿಕಾರಿಗಳು ನೌಕರರ ಆರೋಗ್ಯದ ಬಗ್ಗೆ ಕಾಳಜಿ ತೋರದೇ ವೃಥಾ ಅಲೆದಾಡಿಸುವ ಕಾರ್ಯ ಮಾಡುತ್ತಿರುವುದು ಸಂಘದ ಗಮನಕ್ಕೆ ಬಂದಿದ್ದು ಕೂಡಲೇ ಸೂಕ್ತ ನಿರ್ದೇಶನ ನೀಡುವಂತೆ ಸಂಘ ಒತ್ತಾಯಿಸಿದೆ.