ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ದೇಶದ ಪ್ರಗತಿಗೆ ಕಾಂಗ್ರೆಸ್ ಕೊಡುಗೆ ಅಪಾರ

Lingaraj Badiger
Updated On : 22 Apr 2013, 11:37 am

ಕನ್ನಡಪ್ರಭ ವಾರ್ತೆ, ಸಿಂಧನೂರು, ಏ.21
ಕಾವೇರಿ, ಆಲಮಟ್ಟಿ, ತುಂಗಭದ್ರಾ ಎಡದಂಡೆ ನಾಲಾ ಯೋಜನೆ, ಭದ್ರಾ ಯೋಜನೆ ಹಲವಾರು ನೀರಾವರಿ ಯೋಜನೆಗಳನ್ನು, ಹೆದ್ದಾರಿಗಳನ್ನು ನಿರ್ಮಿಸಿದ ಕೀರ್ತಿ ಕಾಂಗ್ರೆಸ್‌ಗಿದೆ ಎಂದು ಕೇಂದ್ರದ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಇತ್ತೀಚೆಗೆ ಆರ್.ಜಿ.ಎಂ. ಶಾಲಾ ಮೈದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಾದರ್ಲಿ ಹಂಪನಗೌಡರ ಪರ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದರು.
ಹಲವು ಕಾರ್ಯಗಳು: ಬಡಮಕ್ಕಳಿಗೆ ಅಕ್ಷರ ಕಲಿಯಲು ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಸರ್ವಶಿಕ್ಷಣ ಅಭಿಯಾನದಲ್ಲಿ ಬಿಸಿಯೂಟ, ಶಿಕ್ಷಣದ ಮೂಲಭೂತ ಹಕ್ಕು, ನಿರಾಶ್ರಿತರಿಗೆ ಮನೆ, ಭೂ ರಹಿತರಿಗೆ ಭೂಮಿ, ಸ್ತ್ರೀಶಕ್ತಿ ಯೋಜನೆಯಲ್ಲಿ ಮಹಿಳೆಯರ ಸಬಲೀಕರಣ ಈ ಎಲ್ಲಾ ಯೋಜನೆಗಳು ಕಾಂಗ್ರೆಸ್ ಸರ್ಕಾರದಿಂದಲೇ ಆಗಿವೆ. ರಾಷ್ಟ್ರೀಕೃತ ಬ್ಯಾಂಕಿನ ರು. 75 ಕೋಟಿ ಸಾಲ ಮನ್ನಾ ಮಾಡಿದ ಹೆಗ್ಗಳಿಕೆ ಕಾಂಗ್ರೆಸ್ ಸರ್ಕಾರದ್ದಾಗಿದೆ. ದೇಶದ ಅಭಿವೃದ್ಧಿ, ಪ್ರಗತಿಯಲ್ಲಿ ಕಾಂಗ್ರೆಸ್ ಕೊಡುಗೆ ಅಪಾರವಾಗಿದೆ ಎಂದು ಖರ್ಗೆ ಹೇಳಿದರು.
ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜನ ಕತ್ತಲೆಯಲ್ಲಿ ಕಾಲಕಳೆಯುವಂತಾಗಿದೆ. ವಿದ್ಯುತ್ ಉತ್ಪಾದನೆಗೆ ಕೇವಲ ರು. 4 ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ಖರೀದಿಗೆ ರು. 10ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ಆದರೂ ರೈತರು, ವಿದ್ಯಾರ್ಥಿ ಯುವಜನರು ವಿದ್ಯುತ್ ಅಭಾವದಿಂದ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಗಳಿಗೆ ತಮ್ಮ ಹೆಸರು ಮತ್ತು ಭಾವಚಿತ್ರಗಳನ್ನು ಹಾಕಿಸಿಕೊಂಡಿರುವ ಬಿಜೆಪಿ ಸರ್ಕಾರದ ಮಂತ್ರಿಗಳಿಗೆ ಪ್ರಧಾನಮಂತ್ರಿಯ ಭಾವಚಿತ್ರ ಹಾಕಬೇಕೆನ್ನುವ ಸೌಜನ್ಯ ಇಲ್ಲದಿರುವುದು ದುರಾದೃಷ್ಟಕರ ಎಂದರು.
108 ವಾಹನ ಯಾರದು?: ಆರೋಗ್ಯ ಕವಚ ಯೋಜನೆಯಲ್ಲಿ 100ಕ್ಕೆ 100ರಷ್ಟು ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದರೆ, ಆ ಹಣದಲ್ಲಿ ವಾಹನ ಖರೀದಿಸಿ ತಮ್ಮ ಭಾವಚಿತ್ರ ಹಾಕಿಸಿಕೊಂಡ ವಿಚಿತ್ರ ವ್ಯಕ್ತಿಗಳು ಬಿಜೆಪಿ ಸರ್ಕಾರದಲ್ಲಿದ್ದರು ಎಂದು ಹೆಸರು ಪ್ರಸ್ತಾಪಿಸದೆ ಶ್ರೀರಾಮುಲುರನ್ನು ಲೇವಡಿ ಮಾಡಿದರು.
ಕೇಂದ್ರ ಸರ್ಕಾರ ಶಿಕ್ಷಣಕ್ಕಾಗಿ 41ಸಾವಿರ ಕೋಟಿ, ಆಹಾರಕ್ಕಾಗಿ 60ಸಾವಿರ ಕೋಟಿ, ರಸಗೊಬ್ಬರಗಳಿಗೆ 72ಸಾವಿರ ಕೋಟಿ ಜನತೆಗಾಗಿ ನೀಡುತ್ತಿದೆ. ನೀರಿನ ಅಭಾವ ಉಂಟಾದಾಗ ಮಂತ್ರಾಲಯದಿಂದ ಗುಲ್ಬರ್ಗಾ ಮತ್ತು ರಾಯಚೂರಿಗೆ ನೀರು ತಂದ ಕಾಳಜಿ ಕಾಂಗ್ರೆಸ್ ಸರ್ಕಾರಕ್ಕಿದೆ ಎಂದು ಸ್ಮರಿಸಿದರು.
ಜೆಡಿಎಸ್ ದ್ವಂದ್ವ ನೀತಿ: ಜೆಡಿಎಸ್ ಅಪ್ಪ-ಮಕ್ಕಳ ಪಕ್ಷವಾಗಿದೆ. ಅದು ಕೇವಲ ದೇವೇಗೌಡ ಮತ್ತು ಅವರ ಕುಟುಂಬದಲ್ಲಿ ಜಾತ್ಯತೀತತೆಯನ್ನು ಕಾಪಾಡುತ್ತಾ ಬಂದಿದೆ. ಬಿಜೆಪಿ ಸಖ್ಯ ಬೆಳೆಸಿ ಅದನ್ನು  ಅಧಿಕಾರಕ್ಕೆ ತಂದವರೇ ಕುಮಾರಸ್ವಾಮಿ. ಮತ್ತೆ ತಮಗೆ ಬೇಡವೆಂದಾಗ ಅದನ್ನು ಕೋಮುವಾದಿಯೆಂದು ಜರಿಯುತ್ತಾರೆ. ಅನುಕೂಲ ಬಂದಾಗ ಮತ್ತೆ ಕೈ ಜೋಡಿಸುತ್ತಾರೆ. ಕಾರಣ ಜೆಡಿಎಸ್, ಬಿಎಸ್‌ಆರ್, ಬಿಜೆಪಿ, ಕೆಜೆಪಿಗಳಿಗೆ ಮತ ನೀಡಿ ವ್ಯರ್ಥ ಮಾಡದೆ ಕಾಂಗ್ರೆಸ್ ಬೆಂಬಲಿಸಬೇಕೆಂದು ಮಾಜಿ ಸಚಿವ ಹಾಗೂ ರಾಜ್ಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸಗೀರ್ ಅಹ್ಮದ್ ವಿನಂತಿ ಮಾಡಿದರು.
ಕಾಂಗ್ರೆಸ್ ಗೆಲ್ಲಿಸಿ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಹನುಮಂತರಾವ್ ಮಾತನಾಡಿ, ಕರ್ನಾಟಕಕ್ಕೆ ಅವಮಾನ ಮಾಡಿದ ಮತ್ತು ಈ ಭಾಗದ ಸಂಪತ್ತನ್ನು ಲೂಟಿ ಮಾಡಿದ ಪಕ್ಷಗಳನ್ನು ಸೋಲಿಸಿ, ಕಾಂಗ್ರೆಸ್‌ಗೆ ಮತ ನೀಡುವಂತೆ ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ, ವೀಕ್ಷಕ ಆನಂದ ಭಾಸ್ಕರ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಕೆಪಿಸಿಸಿ ಸದಸ್ಯರಾದ ಎನ್.ಶಿವನಾಗಪ್ಪ, ತಿಮ್ಮಯ್ಯ ನಾಯಕ, ಜಿ.ಪಂ. ಅಧ್ಯಕ್ಷೆ ಲಲಿತಮ್ಮ ಲಿಂಗರಾಜ, ಸದಸ್ಯರಾದ ಚಂದುಸಾಬ ಮುಳ್ಳೂರು, ಶಿವನಗೌಡ ಎಲೆಕೂಡ್ಲಗಿ,  ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಂ.ಕಾಳಿಂಗಪ್ಪ ವಕೀಲ, ಮುಖಂಡರಾದ ಪಾಮಯ್ಯ ಮುರಾರಿ, ಮಲ್ಲನಗೌಡ ಕನ್ನಾರಿ, ಸಿದ್ಧರಾಮ ನೀರಮಾನ್ವಿ, ಕರಿಯಪ್ಪ ಹರೇಟನೂರು, ರಾಮಣ್ಣ ಮುಕ್ಕುಂದಾ, ಬಸಪ್ಪ ಕೊಟ್ರಪ್ಪ, ಶರಣಪ್ಪ ಮೇಟಿ, ಯಮನಪ್ಪ ಮಲ್ಲಾಪುರ, ನಾಗಪ್ಪ ಗೋಮರ್ಸಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement