ಪ್ರಚಾರ ಭರಾಟೆ ಜೋರು
ಕನ್ನಡಪ್ರಭ ವಾರ್ತೆ, ರಾಯಚೂರು, ಏ.21
ಜಿಲ್ಲೆಯಲ್ಲಿ ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಪ್ರಚಾರದ ಅಬ್ಬರದ ಕಾವೇರತೊಡಗಿದೆ. ಎಲ್ಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಪ್ರಚಾರದಲ್ಲಿ ತೊಡಗಿದ್ದು, ಮತದಾರರ ಮನಮೊಲಿಕೆಯಲ್ಲಿದ್ದಾರೆ. ದಿನಗಳೆದಂತೆ ಚುನಾವಣೆ ಕಣ ರಂಗೇರತೊಡಗಿದೆ.
ಜಿಲ್ಲೆಯ ಕಣದಲ್ಲಿ ವಿವಿಧ ಪಕ್ಷಗಳ 86 ಜನ ಅಭ್ಯರ್ಥಿಗಳು ಕಣದಲ್ಲಿದ್ದು, ಪ್ರಮುಖ ರಾಜಕೀಯ ಪಕ್ಷಗಳು ಭಿನ್ನಮತದ ಭೀತಿಯ ಹೊರತಾಗಿಯೂ ಗೆಲ್ಲುವ ವಿಶ್ವಾಸದೊಂದಿಗೆ ಮುನ್ನುಗ್ಗುತ್ತಿವೆ. ಮತದಾರರ ಎದುರು ತರಹೇವಾರಿ ರೀತಿಯಲ್ಲಿ ಪ್ರಚಾರ ಮಾಡುತ್ತಾ ಮತದಾರರ ಸೆಳೆಯುವ ತಂತ್ರಗಳಿಗೆ ಅಭ್ಯರ್ಥಿಗಳು ಮೊರೆ ಹೋಗುತ್ತಿದ್ದಾರೆ.
ಬಂಡಾಯ ಅಭ್ಯರ್ಥಿ ಆತಂಕ ನಿವಾರಣೆ: ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆಯೇ ರಾಯಚೂರು ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಎದುರಾಗಿದ್ದ ಬಂಡಾಯ ಅಭ್ಯರ್ಥಿ ಆತಂಕ ನಿವಾರಣೆಯಾಗಿದೆ. ಬಂಡಾಯ ಅಭ್ಯರ್ಥಿಯು ತಮ್ಮ ನಾಮಪತ್ರ ಹಿಂಪಡೆಯುವ ಮೂಲಕ ಅಧಿಕೃತ ಅಭ್ಯರ್ಥಿ ಸೈಯದ್ ಯಾಸೀನ್ ನಿರಾಳತೆ ಕಂಡಿದ್ದಾರೆ.
ಈ ಮಧ್ಯೆ ಜೆಡಿಎಸ್ನಲ್ಲಿ ನಗರ ಕ್ಷೇತ್ರದ ಅಭ್ಯರ್ಥಿ ಡಾ. ಶಿವರಾಜ್ ಪಾಟೀಲ್ ಮನೆ ಮನೆಗೆ ತೆರಳಿ ಮತ ಯಾಚಿಸುತ್ತಿದ್ದಾರೆ. ಹಾಲಿ ಕಾಂಗ್ರೆಸ್ ಶಾಸಕ ಸೈಯದ್ ಯಾಸೀನ್ ವಿರುದ್ಧವೇ ಆರೋಪಗಳ ಸುರಿಮಳೆ ಸುರಿಸಲಾಗುತ್ತಿದೆ. ಅಭಿವೃದ್ಧಿಯಲ್ಲಿನ ವೈಫಲ್ಯಗಳೇ ಈಗ ಅಸ್ತ್ರಗಳಾಗಿ ಬಳಕೆಯಾಗುತ್ತಿವೆ.
ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ: ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ ಪೂಜಾಗಾಂಧಿ ಅವರು ಈಗಾಗಲೇ ನಗರದ ಬಹುತೇಕ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದು ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ನಗರ ಕ್ಷೇತ್ರದ ವ್ಯಾಪ್ತಿಯಲ್ಲಿನ ಕೊಳಚೆ ಪ್ರದೇಶಗಳು, ಪ್ರಮುಖ ಬಡಾವಣೆಗಳಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದ್ದಾರೆ.
ಅದೇ ರೀತಿ ಬಿಜೆಪಿ ಅಭ್ಯರ್ಥಿ ತ್ರಿವಿಕ್ರಮ್ ಜೋಷಿ ಕ್ಷೇತ್ರದ ವ್ಯಾಪ್ತಿಯಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ನಗರಾಭಿವೃದ್ಧಿಯಲ್ಲಿ ನಿರ್ಲಕ್ಷ್ಯ ತೋರಿದ್ದಾರೆಂದು ಅವರು ಆರೋಪಿಸಿದ್ದಾರೆ. ಆ ಮೂಲಕ ಮತದಾರರನ್ನು ಸೆಳೆಯುವ ತಂತ್ರ ನಡೆಸಿದ್ದಾರೆ. ಕೆಜೆಪಿ ಪಕ್ಷದ ಬಸವರಾಜ ಕಳಸ ಸಹ ಪ್ರಚಾರ ಆರಂಭಿಸಿದ್ದಾರೆ.
ಚುನಾವಣೆ ಪ್ರಚಾರ ಸಭೆ: ಈ ಮಧ್ಯೆ ನಗರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಹಿರಿಯ ನಾಯಕರಾದ ಕಾಂಗ್ರೆಸ್ನ ಮಲ್ಲಿಕಾರ್ಜುನ ಖರ್ಗೆ, ಕೆಜೆಪಿಯ ಯಡಿಯೂರಪ್ಪ ನಗರ ಸೇರಿದಂತೆ ಜಿಲ್ಲಾದ್ಯಂತ ಚುನಾವಣೆ ಪ್ರಚಾರ ಸಭೆಗಳನ್ನು ನಡೆಸಿದ್ದು ಕಾರ್ಯಕರ್ತರಲ್ಲಿ ಸ್ಫೂರ್ತಿ ತುಂಬಿದ್ದಾರೆ. ಏ.23 ಕ್ಕೆ ಸಿಂಧನೂರಿನಲ್ಲಿ ಕಾಂಗ್ರೆಸ್ ಯುವನಾಯಕ ರಾಹುಲ್ ಗಾಂಧಿ ಚುನಾವಣೆ ಪ್ರಚಾರ ಸಭೆ ನಡೆಸಲಿದ್ದಾರೆ.
ಮುಂದಿನ ದಿನಗಳಲ್ಲಿ ಇನ್ನೂ ಅನೇಕ ನಾಯಕರು ಜಿಲ್ಲೆಗೆ ಆಗಮಿಸುವ ಸಾಧ್ಯತೆಯಿದ್ದು, ಹಣ, ಮದ್ಯದ ಹೊಳೆಯ ಜತೆಗೆ ಮನೆ ಮನೆಗೆ ತೆರಳಿ ಮತ ಯಾಚನೆಯ ಕಾರ್ಯದಲ್ಲಿ ಅಭ್ಯರ್ಥಿಗಳು ತೊಡಗಿದ್ದಾರೆ. ಮತದಾರರ ಮನಮೊಲಿಕೆಗೆ ನಾನಾ ರೀತಿಯ ಸರ್ಕಸ್ ಮಾಡುತ್ತಿರುವುದು ಕಂಡುಬಂದಿದೆ.
ಜೆಡಿಎಸ್ನಲ್ಲಿ ಗೊಂದಲ ಇಲ್ಲ: ಎಸ್.ಆರ್. ರಸೂಲ್
ಮುದಗಲ್: ಸ್ಥಳೀಯ ಜೆಡಿಎಸ್ ಕಾರ್ಯಕರ್ತರಲ್ಲಿ, ಮುಖಂಡರಲ್ಲಿ ಮುಖಂಡತ್ವದ ಬಗ್ಗೆ ಯಾವುದೇ ಗೊಂದಲ ಇಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ನಡೆಸಲಾಗುತ್ತಿದೆ ಎಂದು ಎಪಿಎಂಸಿ ಉಪಾಧ್ಯಕ್ಷ ಎಸ್.ಆರ್. ರಸೂಲ್ ಹೇಳಿದರು.
ತಮ್ಮ ನಿವಾಸದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಕ್ಷದಲ್ಲಿ ಸಣ್ಣ ಪುಟ್ಟ ಗೊಂದಲಗಳು ಇದ್ದವು. ಮಾಜಿ ಶಾಸಕ ಮಾನಪ್ಪ ವಜ್ಜಲ್ ಶಮನಗೊಳಿಸಿದ್ದಾರೆ. ನಮ್ಮ ಪಕ್ಷದ 10 ಜನ ಸದಸ್ಯರು ಯಾವ ಪಕ್ಷಕ್ಕೂ ಜಂಪ್ ಮಾಡುವುದಿಲ್ಲ. ಎಲ್ಲರು ಮಾನಪ್ಪ ವಜ್ಜಲ್ರನ್ನು ಬೆಂಬಲಿಸಿ ಗೆಲವಿಗೆ ಶ್ರಮಿಸುತ್ತಿರುವುದಾಗಿ ಹೇಳಿದರು. ಕ್ಷೇತ್ರದಲ್ಲಿ ಶಾಸಕರಾಗಿದ್ದಾಗ ಮಾನಪ್ಪ ವಜ್ಜಲ್ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ.
ತಮ್ಮನ್ನು ಮತ್ತು ತಮ್ಮ ಬೆಂಬಲಿಗರನ್ನು ಸದಸ್ಯರನ್ನು ಮತ್ತು ಕಾರ್ಯಕರ್ತರನ್ನು ಅನೇಕ ಪಕ್ಷಗಳ ಮುಖಂಡರು ತಮ್ಮ ಮನೆಗೆ ಭೇಟಿ ನೀಡಿ ಅಹ್ವಾನ ನೀಡಿದ್ದರು. ಆದರೆ ಮಾನಪ್ಪ ವಜ್ಜಲರಿಗೆ ನಿಷ್ಠೆಯಿಂದ ಕೆಲಸ ಮಾಡುವುದಾಗಿ ಹೇಳಿದರು. ಪ.ಪಂ. ಸದಸ್ಯ ವಿರೇಶ ವಡ್ಡರ ಮತ್ತು ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಯಾವುದೇನಾಯಕತ್ವದ ಬಗ್ಗೆ ಗೊಂದಲ ಇಲ್ಲ, ತಾವು ಯಾವುದೇ ಕಾರಣಕ್ಕು ಜೆಡಿಎಸ್ ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.