ವೈದ್ಯಕೀಯ ವೆಚ್ಚ ವಿಳಂಬಕ್ಕೆ ನೌಕರರ ಸಂಘದ ಖಂಡನೆ
ರಾಯಚೂರು: ಜಿಲ್ಲೆಯಲ್ಲಿ ಸರ್ಕಾರಿ ನೌಕರರ ವೈದ್ಯಕೀಯ ವೆಚ್ಚ ಮರುಪಾವತಿ ಪ್ರಕರಣಗಳಿಗೆ ಸಂಬಂಧಿಸಿ ಇಲಾಖೆಗಳ ಮೇಲಧಿಕಾರಿಗಳು ಅನಗತ್ಯವಾಗಿ ವಿಳಂಬ ಮಾಡುವ ಮೂಲಕ ನಿಯಮಬಾಹಿರ ಆಕ್ಷೇಪಣೆಗಳನ್ನು ವ್ಯಕ್ತ ಮಾಡುತ್ತಿದ್ದಾರೆಂದು ಜಿಲ್ಲಾ ಸರ್ಕಾರಿ ನೌಕರರ ಸಂಘ ಆರೋಪಿಸಿದೆ. ಈ ಕುರಿತು ಜಿಪಂ ಸಿಇಒ ಅವರಿಗೆ ದೂರು ಸಲ್ಲಿಸಿ, ವೈದ್ಯಕೀಯ ವೆಚ್ಚಗಳನ್ನು ಮಾಡಿದ ನೌಕರನ ನೆರವಿಗೆ ಧಾವಿಸುವುದು ಅಧಿಕಾರಿಗಳ ಕಾರ್ಯವಾಗಬೇಕು. ಆದರೆ ಅನಗತ್ಯವಾಗಿ ಆಕ್ಷೇಪಣೆಗಳನ್ನು ವ್ಯಕ್ತಪಡಿಸುತ್ತಾ ನೌಕರರಿಗೆ ಪಾವತಿಯನ್ನು ಮಾಡುವಲ್ಲಿ ವಿಳಂಬ ಮಾಡುತ್ತಿದ್ದಾರೆಂದು ದೂರಿದ್ದಾರೆ. ಜೀವನಾಧಾರವಾಗಿ ವೇತನ ಅವಲಂಬಿಸಿರುವ ನೌಕರರು ಉದ್ಭವವಾಗುವ ವೈದ್ಯಕೀಯ ವೆಚ್ಚಗಳನ್ನು ಭರಿಸಲು ಮರುಪಾವತಿಯ ಅವಕಾಶ ಮಾಡಿಕೊಟ್ಟಿದೆ. ಆದರೆ ಕೆಲ ಇಲಾಖೆಗಳ ಮೇಲಧಿಕಾರಿಗಳು ನೌಕರರ ಆರೋಗ್ಯದ ಬಗ್ಗೆ ಕಾಳಜಿ ತೋರದೇ ವೃಥಾ ಅಲೆದಾಡಿಸುವ ಕಾರ್ಯ ಮಾಡುತ್ತಿರುವುದು ಸಂಘದ ಗಮನಕ್ಕೆ ಬಂದಿದ್ದು ಕೂಡಲೇ ಸೂಕ್ತ ನಿರ್ದೇಶನ ನೀಡುವಂತೆ ಸಂಘ ಒತ್ತಾಯಿಸಿದೆ.