ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅತ್ಯಾಚಾರ; ಬಾಲಕಿ ಪೋಷಕರಿಗೆ ಆಮಿಷ- ಸಂಘಟನೆಗಳ ಖಂಡನೆ

Rashmi Kasaragodu
Updated On : 23 Apr 2013, 12:33 pm

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.22
ದೆಹಲಿಯಲ್ಲಿ ಇತ್ತೀಚೆಗೆ ಅತ್ಯಾಚಾರಕ್ಕೊಳಗಾದ 5 ವರ್ಷ ಬಾಲಕಿಯ ಪೋಷಕರಿಗೆ ಆಮಿಷವೊಡ್ಡಿದ ಮತ್ತು ಪ್ರತಿಭಟನಾನಿರತ ಮಹಿಳೆಯರನ್ನು ಥಳಿಸಿದ ಪೊಲೀಸರ ಕ್ರಮವನ್ನು ಖಂಡಿಸಿ ನಗರದಲ್ಲಿ ಎಐಎಂಎಸ್‌ಎಸ್, ಎಐಡಿಎಸ್‌ಒ ಹಾಗೂ ಎಐಡಿವೈಒ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.
ಐದು ವರ್ಷದ ಬಾಲಕಿಯ ಮೇಲೆ ನಾಲ್ಕು ದಿನಗಳ ಕಾಲ ಸತತವಾಗಿ ಅತ್ಯಾಚಾರ ಎಸಗಲಾಗಿದೆ. ಆಕೆಯ ಮುಖದ ಮೇಲೆ ಗಾಯಗಳಾಗಿವೆ. ಕಾಣೆಯಾಗಿದ್ದ ಬಾಲಕಿಯನ್ನು ಹುಡುಕುವಲ್ಲಿ ಪೊಲೀಸರ ನಿಷ್ಕ್ರೀಯತೆ ತೋರಿದ್ದಾರೆ ಎಂದು ಸಂಘಟನೆಗಳ ಮುಖಂಡರು ಖಂಡಿಸಿದರು.
ಪೊಲೀಸರ ವಿರುದ್ಧ ಆಕ್ರೋಶ: ನೊಂದ ಬಾಲಕಿಯ ಪೋಷಕರು ಸುಮ್ಮನಿರಬೇಕು ಎಂದು ಹಣ ನೀಡಿ ಆಮಿಷವೊಡ್ಡಲು ಯತ್ನಿಸಿದ ಪೊಲೀಸರ ದುಷ್ಕೃತ್ಯವು ಮತ್ತಷ್ಟು ಖಂಡನೀಯ. ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದ ಮಹಿಳಾ ಪ್ರತಿಭಟನಾಕಾರರನ್ನು ಥಳಿಸಿದ ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ನೊಂದವರ ಹಾಗೂ ಅಪರಾಧಗಳ ಕುರಿತಾದ ಪೊಲೀಸರ ಇಂತಹ ಬೇಜವಾಬ್ದಾರಿ ಹಾಗೂ ಸೂಕ್ಷ್ಮರಹಿತ ಧೋರಣೆಯೇ ಅಪರಾಧಿಗಳು ಇಂತಹ ಹೀನ ಕೃತ್ಯ ನಡೆಸಲು ಕುಮ್ಮಕ್ಕು ನೀಡುತ್ತಿದೆ. ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಿರುವುದು ಪೊಲೀಸರ ದುರ್ನಡತೆಯ ಮತ್ತೊಂದು ಉದಾಹರಣೆಯಾಗಿದೆ ಎಂದರು.
ಕ್ರಮಕ್ಕೆ ಆಗ್ರಹ: ದೆಹಲಿ ಸರ್ಕಾರವು ಈ ಕೂಡಲೇ ಪೊಲೀಸ್ ಅಧಿಕಾರಿಗಳಿಗೆ ಅತ್ಯುಗ್ರ ಶಿಕ್ಷೆ ವಿಧಿಸಬೇಕು, ಅಪರಾಧಿಯನ್ನು ಈ ಕೂಡಲೇ ಬಂಧಿಸಬೇಕು. ಬಾಲಕಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ದೊರಕಿಸುವಲ್ಲಿ ಸರ್ಕಾರವು ಪ್ರಾಮಾಣಿಕ ಯತ್ನಗಳನ್ನು ನಡೆಸಬೇಕು. ಎಲ್ಲ ವೈದ್ಯಕೀಯ ಖರ್ಚುಗಳನ್ನು ಭರಿಸಬೇಕೆಂದು ಒತ್ತಾಯಿಸಿದರು.
ಡಾ. ಸೀಮಾ ದೇಶಪಾಂಡೆ, ಶರಣಗೌಡ ಗೂಗಲ್, ಎಸ್.ಎಂ. ಶರ್ಮಾ ಸೇರಿದಂತೆ ಹಲವಾರು ಮಹಿಳೆಯರು ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement