ಕಾಂಗ್ರೆಸ್ಗೆ ವಿರೋಧ- ಯಾದವ ಸಮಾಜದ ನಿರ್ಧಾರವಲ್ಲ: ರೆಡ್ಡಿ
ರಾಯಚೂರು: ಯಾದವ ಸಮಾಜದ ಹಿರಿಯ ಮುಖಂಡ ಎ.ಕೃಷ್ಣಪ್ಪ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನಿರಾಕರಿಸಿದ್ದು ಸರಿಯಲ್ಲ. ಆದರೆ ಅವರಿಗೆ ಟಿಕೆಟ್ ನೀಡದ್ದಕ್ಕೆ ಯಾದವ ಸಮಾಜದವರು ಕಾಂಗ್ರೆಸ್ ಪಕ್ಷದ ವಿರುದ್ಧ ಮತ ಚಲಾಯಿಸುವಂತೆ ಯಾದವ ಸಮಾಜದ ಯುವ ಘಟಕ ಕರೆ ನೀಡಿರುವುದು ಯಾದವ ಸಮಾಜದ ನಿರ್ಧಾರವಲ್ಲ ಎಂದು ಯಾದವ ಸಂಘದ ಜಂಟಿ ಕಾರ್ಯದರ್ಶಿ ಕಮಾಂಡರ್ ತಿಮ್ಮಾರೆಡ್ಡಿ ಯಾದವ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಯಾದವ ಸಮಾಜದ ಹಿರಿಯ ನಾಯಕ ಎ.ಕೃಷ್ಣಪ್ಪ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಬೇಕಿತ್ತು. ಆದರೆ ಕಾರಣಾಂತರಗಳಿಂದ ಟಿಕೆಟ್ನೀಡಿಲ್ಲ. ಆದರೆ ಬೇರೆ ಕ್ಷೇತ್ರದಲ್ಲಿ ಯಾದವ ಸಮಾಜದವರಿಗೆ ಟಿಕೆಟ್ ನೀಡಿರುವ ಕಾಂಗ್ರೆಸ್ ಪಕ್ಷವು ನಗರ ಕ್ಷೇತ್ರದಲ್ಲಿ ಹಾಗೂ ಜಿಲ್ಲೆಯಲ್ಲಿ ಸಮಾಜವನ್ನು ಅನೇಕ ಸಂದರ್ಭದಲ್ಲಿ ಬೆಂಬಲಿಸಿದೆ ಎಂದು ತಿಳಿಸಿದರು.
ನಗರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್ ಪಕ್ಷ ಯಾದವ ಸಮಾಜಕ್ಕೆ ಬೆಂಬಲಿಸಿದೆ. ಆದರೆ ಎ.ಕೃಷ್ಣಪ್ಪರಿಗೆ ಟಿಕೆಟ್ ನಿರಾಕರಿಸಿದ್ದಕ್ಕೆ ಕಾಂಗ್ರೆಸ್ ಪಕ್ಷವನ್ನು ವಿರೋಧಿಸುವಂತೆ ಯಾದವ ಸಮಾಜದ ಯುವ ಘಟಕದ ಮುಖಂಡ ಜಂಬುನಾಥ್ ಯಾದವ್ ನೀಡಿದ ಹೇಳಿಕೆ ಅವರ ವೈಯಕ್ತಿಕವಾದುದೇ ವಿನಃ ಸಮಾಜದ ನಿರ್ಧಾರವಲ್ಲ. ಇಂಥ ಹೇಳಿಕೆ ನೀಡಿರುವುದು ದುರದೃಷ್ಟಕರ ಸಂಗತಿ ಎಂದರು.
ಯಾದವ ಸಮಾಜದವರಲ್ಲಿ ಗೊಂದಲ ಮೂಡಲು ಕಾರಣರಾದ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸಮಾಜದ ಸಭೆ ನಡೆಸಿ ನಿರ್ಧರಿಸಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ನರಸಪ್ಪ ಯಾದವ್, ಗುರುಸ್ವಾಮಿ ಕಲ್ಲೂರು ಸೇರಿದಂತೆ ಅನೇಕರಿದ್ದರು.