ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಾರ್ಮಿಕರಿಗೆ ಪ್ರೋತ್ಸಾಹಿಸುವಂತೆ ಮಾಲೀಕರಿಗೆ ಆಕುರಾತಿ ಸೂಚನೆ

Rashmi Kasaragodu
Updated On : 23 Apr 2013, 12:32 pm

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.22
ಗುಲ್ಬರ್ಗ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಕಾರ್ಖಾನೆಗಳ ಮಾಲೀಕರು ತಮ್ಮ ಕಾರ್ಮಿಕರು ಮೇ 5 ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೋತ್ಸಾಹಿಸಬೇಕು ಹಾಗೂ ಸದರಿ ದಿನದಂದು ವೇತನ ಸಹಿತ ರಜಾ ದಿನವೆಂದು ಘೋಷಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಲ್ಲವಿ ಆಕುರಾತಿ ಹೇಳಿದರು.
ಜಿಲ್ಲೆಯ ವಿವಿಧ ಕಾರ್ಖಾನೆಗಳ ಮಾಲೀಕರು ಹಾಗೂ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಮಿಕ ವರ್ಗದವರು ಹಾಗೂ ಅವರ ಅವಲಂಬಿತರು ಕಡ್ಡಾಯವಾಗಿ ಮತದಾನ ಮಾಡುವ ಬಗ್ಗೆ ಪ್ರೇರೇಪಿಸಬೇಕು ಹಾಗೂ ಅರಿವು ಮೂಡಿಸಬೇಕು. ಈ ಹಿಂದಿನ ಚುನಾವಣೆಯಲ್ಲಿ ಶಹಾಬಾದ್, ವಾಡಿ ಪಟ್ಟಣಗಳ ಕೆಲವು ಮತಗಟ್ಟೆಗಳಲ್ಲಿ ಶೇ. 50ಕ್ಕಿಂತ ಕಡಿಮೆ ಮತದಾನವಾಗಿರುವುದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ಈ ಪ್ರದೇಶಗಳಲ್ಲಿ ಶೇ. 100ರಷ್ಟು ಮತದಾನವಾಗುವ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನ ಮಾಡಬೇಕು. ಆಯೋಗ ಹಮ್ಮಿಕೊಂಡ ಸ್ವೀಪ್ ಚಟುವಟಿಕೆಗಳನ್ನು ಕಾರ್ಮಿಕರಿಗೆ ತಲುಪಿಸಬೇಕು ಎಂದರು.
ಈ ಚುನಾವಣೆಯಲ್ಲಿ ಕಾರ್ಮಿಕ ವರ್ಗದಿಂದ ಶೇ. 100ರಷ್ಟು ಮತದಾನ ಮಾಡಿಸಿದ ಕಾರ್ಖಾನೆಗೆ ಉತ್ತಮ ಸ್ವೀಪ್ ಅನುಷ್ಠಾನ ಪ್ರಶಸ್ತಿ ಹಾಗೂ ಉತ್ತಮ ಸ್ವೀಪ್ ಲೇಬರ್ ಯೂನಿಯನ್ ಪ್ರಶಸ್ತಿ ನೀಡಲಾಗುವುದು. ಸ್ವೀಪ್ ಯೋಜನೆಯ ಕಾರ್ಯ ಚಟುವಟಿಕೆಗಳು ಯಾವುದೇ ರಾಜಕೀಯ ಆಧಾರಿತವಾಗಿರದೆ ನಿಷ್ಪಕ್ಷಪಾತವಾಗಿರಬೇಕು ಹಾಗೂ ಕಡ್ಡಾಯ ಮತದಾನದ ಬಗ್ಗೆ ಮಾತ್ರ ತಿಳುವಳಿಕೆ ನೀಡಿ ಮೇ 5ರಂದು ಮತದಾನದಲ್ಲಿ ಭಾಗವಹಿಸುವಂತೆ ಎಲ್ಲ ಕಾರ್ಮಿಕರಿಗೆ ಪ್ರೋತ್ಸಾಹಿಸಬೇಕು ಎಂದು ಸೂಚಿಸಿದರು.
ಯಾವುದೇ ಕಾರ್ಖಾನೆಗಳ ಮಾಲೀಕರು ಕಾರ್ಮಿಕರಿಗೆ ರಜಾ ನೀಡಲು ನಿರಾಕರಿಸಿದ್ದಲ್ಲಿ ಕರ್ನಾಟಕ ಔದ್ಯಮಿಕ ಸಂಸ್ಥೆಗಳ ಕಾಯ್ದೆ 1965ರ ಕಲಂ 3(ಎ) ಅನ್ವಯ 3 ತಿಂಗಳ ಜೈಲುಶಿಕ್ಷೆ ಅಥವಾ 500 ದಂಡ ಅಥವಾ ಇವೆರಡನ್ನೂ ವಿಧಿಸಿ ಶಿಕ್ಷಿಸಲು ಸೂಕ್ತ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಗುಲ್ಬರ್ಗ ಕಾರ್ಮಿಕ ಅಧಿಕಾರಿ ಜಿ. ಸಿದ್ಧಲಿಂಗಪ್ಪ, ವಿವಿಧ ಕಾರ್ಖಾನೆಗಳ ಮಾಲೀಕರು, ವಿವಿಧ ಕಾರ್ಮಿಕ ಸಂಘಗಳ ಮುಖಂಡರು ಸಭೆ ಚರ್ಚೆಯಲ್ಲಿ ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement