ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಕೈ' ಕೋಟೆಗೆ ಹೊಸಬರ ಲಗ್ಗೆ

Rashmi Kasaragodu
Updated On : 23 Apr 2013, 12:29 pm

ತ್ರಿಕೋನ ಕಣದಲ್ಲಿ ಭರ್ಜರಿ ಪೈಪೋಟಿ ೤ ಕಾಂಗ್ರೆಸ್‌ಗೆ ಜೆಡಿಎಸ್, ಬಿಜೆಪಿ ಸೆಡ್ಡು


ಕನ್ನಡಪ್ರಭ ವಾರ್ತೆ   ರಾಯಚೂರು   ಏ.22
ಕಾಂಗ್ರೆಸ್ ಭದ್ರಕೋಟೆ ಛಿದ್ರಗೊಳಿಸಲು ಜೆಡಿಎಸ್ ಮತ್ತು ಬಿಜೆಪಿಯಿಂದ ಶತಪ್ರಯತ್ನ. ಹತ್ತು ಹಲವು ಸಮಸ್ಯೆಗಳ ಗೂಡಾಗಿರುವ ಬಿರುಬಿಸಿಲ ರಾಯಚೂರು ನಗರ ಕ್ಷೇತ್ರದಲ್ಲೀಗ ರಾಜಕೀಯ ಕಾವೇರಿದೆ. ಕಳೆದ ಬಾರಿ ಕೈ ವಶದಲ್ಲಿದ್ದ ಕ್ಷೇತ್ರವನ್ನು ಕಿತ್ತುಕೊಳ್ಳಲು ಜೆಡಿಎಸ್ ಮತ್ತು ಬಿಜೆಪಿ ಭರ್ಜರಿ ಪೈಪೋಟಿ ನೀಡಲು ಮುಂದಾಗಿವೆ.
ಕಳೆದ ಅನೇಕ ಚುನಾವಣೆಗಳ ವೇಳೆ ನಗರ ಸೇರಿ ಜಿಲ್ಲೆಯ ಬಹುತೇಕ ಕಡೆ ಕಾಂಗ್ರೆಸ್ ತನ್ನ ಸಾಮರ್ಥ್ಯ ಪ್ರದರ್ಶಿಸಿ ಅಧಿಕಾರಕ್ಕೇರಿದೆ. ಕಾಂಗ್ರೆಸ್‌ನ ಭದ್ರಕೋಟೆಗೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಲಗ್ಗೆಯಿರಿಸಿದರೂ ಯಶಸ್ಸು ದಕ್ಕಿದ್ದು ಕಡಿಮೆ.
ರಾಯಚೂರು ನಗರ ಕ್ಷೇತ್ರದಲ್ಲಿ ಒಟ್ಟು 2.85 ಲಕ್ಷ ಜನಸಂಖ್ಯೆಯಿದೆ. 2013 ರ ಜ.1ರವರೆಗಿನ ಮಾಹಿತಿಯಂತೆ ಕ್ಷೇತ್ರದಲ್ಲಿ 193096 ಮತದಾರರಿದ್ದಾರೆ. ಮಹಿಳಾ ಮತದಾರರ ಸಂಖ್ಯೆಯೇ ಇಲ್ಲಿ ಹೆಚ್ಚು. ಮಹಿಳೆಯರಿಗೆ ಇದುವರೆಗೆ ಸ್ಪರ್ಧೆಗೆ ಅವಕಾಶ ಸಿಕ್ಕಿದ್ದು ಕಡಿಮೆ.
ಭದ್ರಕೋಟೆ: 1957ರಿಂದ ಇದುವರೆಗೆ ನಡೆದ ಚುನಾವಣೆಗಳಲ್ಲಿ 7 ಬಾರಿ ಕಾಂಗ್ರೆಸ್ ಗೆಲವು ಕಂಡಿದೆ. ಜನತಾ ಪರಿವಾರದವರು ಮೂರು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಹೀಗಾಗಿ ನಗರ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಕರೆಸಿಕೊಂಡಿದೆ. ಕಳೆದ ಬಾರಿ ರಾಯಚೂರು ನಗರ ಕ್ಷೇತ್ರವನ್ನು ಕಾಂಗ್ರೆಸ್‌ನ ಶಾಸಕ ಸೈಯದ್ ಯಾಸೀನ್ ಪ್ರತಿನಿಧಿಸಿದ್ದರು. ಈ ಬಾರಿಯೂ ಅವರೇ ಕಾಂಗ್ರೆಸ್ ನಿಂದ ಅಭ್ಯರ್ಥಿ.
ಇವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ತ್ರಿವಿಕ್ರಮ್ ಜೋಷಿ ಮೊದಲ ಬಾರಿಗೆ ಮಹಾ ಚುನಾವಣೆಗೆ ಸ್ಪರ್ಧಿಸುವ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇನ್ನು ಜೆಡಿಎಸ್‌ನಿಂದ ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ಶಿವರಾಜ್ ಪಾಟೀಲ್ ಕಣದಲ್ಲಿದ್ದಾರೆ. ಇವರೂ ಮೊದಲ ಬಾರಿಗೆ ಸ್ಪರ್ಧಿ.
ಕಣದಲ್ಲಿ: ಇನ್ನುಳಿದಂತೆ ಸಾಫ್ಟವೇರ್ ಎಂಜಿನಿಯರ್ ವೃತ್ತಿ ನಿರ್ವಹಿಸಿ ಸಮಾಜ ಸೇವೆಗೆ ಇಳಿದಿರುವ ಬಿಎಸ್ಪಿ ಅಭ್ಯರ್ಥಿ ಹಾರೇಸ್ ಸಿದ್ದಿಖಿ, ಜೆಡಿಯುನಿಂದ ನೂರ್ ಮಹಮದ್, ಬಿಎಸ್ಸಾರ್ ಕಾಂಗ್ರೆಸ್‌ನಿಂದ ನಟಿ ಪೂಜಾಗಾಂಧಿ ಅವರೆಲ್ಲರೂ ಮೊದಲ ಬಾರಿ ಚುನಾವಣೆಗೆ ಧುಮುಕಿದ್ದಾರೆ. ಹಾಗೆಯೇ ಕೆಜೆಪಿ ಅಭ್ಯರ್ಥಿ ಬಸವರಾಜ ಕಳಸ ಅವರೂ ಸಹ ಮೊದಲ ಬಾರಿಗೆ ಮಹಾಚುನಾವಣೆಯ ಕಣದಲ್ಲಿದ್ದಾರೆ.
ಬಿಜೆಪಿಯಲ್ಲಿ ಟಿಕೆಟ್ ಸಿಗದ್ದರಿಂದ ಕಾಂಗ್ರೆಸ್ ಗೆ ಸೇರಿರುವ ಮಾಜಿ ಶಾಸಕ ಪಾಪಾರೆಡ್ಡಿ ಅವರೊಂದಿಗೆ ಸೇರಿ ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರ ಆರಂಭಿಸಿದ್ದಾರೆ. ಇವರಿಗೆ ಸೆಡ್ಡು ಹೊಡೆಯುವಂತೆ ಬಿಜೆಪಿಯ ತ್ರಿವಿಕ್ರಮ್ ಜೋಷಿ ಪ್ರಚಾರ ನಡೆಸಿದ್ದಾರೆ.
ಅದೇ ರೀತಿ ಟಿಕೆಟ್‌ಗಾಗಿ ಪ್ರಯತ್ನಿಸುವುದರಲ್ಲಿಯೇ ಕಾಲಹರಣ ಮಾಡಿರುವ ಜೆಡಿಎಸ್ ಅಭ್ಯರ್ಥಿ ಡಾ.ಶಿವರಾಜ್ ಪಾಟೀಲ್ ತಡವಾಗಿಯಾದರೂ ಪ್ರಚಾರಕ್ಕೆ ತೊಡಗಿ, ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಭರ್ಜರಿ ಪೈಪೋಟಿ ನೀಡಿದ್ದಾರೆ.
ಸಾಕಷ್ಟು ಮುಂಚಿತವಾಗಿಯೇ ಟಿಕೆಟ್ ಘೋಷಣೆಯಾಗಿದ್ದರಿಂದ ನಟಿ ಪೂಜಾಗಾಂಧಿ ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಚಾರ ಆರಂಭಿಸಿದ್ದಾರೆ. ನಗರ ಕ್ಷೇತ್ರದ ಬಗ್ಗೆ ಪರಿಚಯವಿಲ್ಲದಿದ್ದರೂ ಪಕ್ಷದ ಸ್ಥಳೀಯ ನಾಯಕರೊಂದಿಗೆ ಸುತ್ತಾಡಿ ಮತ ಯಾಚಿಸುತ್ತಿದ್ದಾರೆ. ಎಲ್ಲ ಅಭ್ಯರ್ಥಿಗಳು ಹಾಲಿ ಶಾಸಕ ಸೈಯದ್ ಯಾಸೀನ್ ಅವರ ಅಭಿವೃದ್ಧಿಯಲ್ಲಿನ ವೈಫಲ್ಯದ ಆರೋಪದ ಅಸ್ತ್ರ ಪ್ರಯೋಗಿಸುತ್ತಿರುವುದು ಸಾಮಾನ್ಯ.
ಅಂದು- ಇಂದು: 2008 ರಲ್ಲಿ ನಗರ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಹಾಲಿ ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಯಾಸೀನ್ ಅವರು ಆಗ ಜೆಡಿಎಸ್ ನಿಂದ ಕಣದಲ್ಲಿದ್ದ ಎಂ.ಈರಣ್ಣ ಅವರನ್ನು ಸೋಲಿಸಿದ್ದರು. ಆಗ ಮೂರನೇ ಸ್ಥಾನದಲ್ಲಿದ್ದ ಬಿಜೆಪಿಯ ಪಾಪಾರೆಡ್ಡಿ ಈಗ ಕಾಂಗ್ರೆಸ್ ಜತೆ ಕೈ ಜೋಡಿಸಿದ್ದಾರೆ.
ಎಲ್ಲ ಅಭ್ಯರ್ಥಿಗಳು ಮತದಾರರ ಓಲೈಕೆಯಲ್ಲಿದ್ದಾರೆ. ಸದ್ಯ ಕಾಂಗ್ರೆಸ್ ಗೆ ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ತೀವ್ರ ಪೈಪೋಟಿ ಒಡ್ಡಿದ್ದು, ಕೆಜೆಪಿ ಅಭ್ಯರ್ಥಿ ಸಹ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಆದರೆ ಮತದಾರರು ಮಾತ್ರ ಮೌನ ಮುರಿದಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement