ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಚುನಾವಣೆ ಅಕ್ರಮ ತಡೆಗೆ ಕಟ್ಟುನಿಟ್ಟಿನ ತನಿಖೆ

Rashmi Kasaragodu
Updated On : 23 Apr 2013, 12:32 pm

ಕ.ಪ್ರ. ವಾರ್ತೆ  ಗುಲ್ಬರ್ಗ/ಶಹಾಬಾದ್  ಏ.22
ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನರ ದೃಷ್ಟಿಯನ್ನು ತನ್ನತ್ತ ಸೆಳೆದ ಚಿತ್ತಾಪುರ ಮೀಸಲು ಮತಕ್ಷೇತ್ರದಲ್ಲಿ ಚುನಾವಣೆ ಆಯೋಗ ಚುನಾವಣೆ ಅಕ್ರಮ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಪ್ರತಿ 10 ಕಿ.ಮೀ. ವ್ಯಾಪ್ತಿಯಲ್ಲಿ ಅರೆ ಸೇನಾಪಡೆ, ಪೊಲೀಸರು, ಅಧಿಕಾರಿಗಳು ವಾಹನಗಳ ತೀವ್ರ ತನಿಖೆ ನಡೆಸುತ್ತಿದ್ದಾರೆ.
ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ, ಹಾಲಿ ಶಾಸಕ ವಾಲ್ಮೀಕಿ ನಾಯಕ, ಮಾಜಿ ಸಚಿವ ಸಿ. ಗುರುನಾಥರಂಥ ಘಟಾನುಘಟಿಗಳು ಸ್ಪರ್ಧಿಸುತ್ತಿರುವುದರಿಂದ ಈ ಕ್ಷೇತ್ರ ಪ್ರತಿಷ್ಠೆಯ ಕ್ಷೇತ್ರವಾಗಿದ್ದು, ತುರುಸಿನ ಸ್ಪರ್ಧೆ ಇರುವುದರಿಂದ ಚುನಾವಣೆ ಅಕ್ರಮಗಳು ಹೆಚ್ಚು ನಡೆಯುವ ಸಾಧ್ಯತೆ ಇದೆ. ಹೀಗಾಗಿ ಚುನಾವಣೆ ಆಯೋಗ ಹೆಚ್ಚಿನ ನಿಗಾ ವಹಿಸಿದೆ.
ತಾತ್ಕಾಲಿಕ ಚಕ್ ಪೋಸ್ಟ್: ನಾಲವಾರ ಕ್ರಾಸ್ ಬಳಿ ಚುನಾವಣೆಗಾಗಿ ತಾತ್ಕಾಲಿಕ ಚಕ್ ಪೋಸ್ಟ್ ನಿರ್ಮಿಸಿದ್ದು, ಇಬ್ಬರು ಪೊಲೀಸ್ ಸಿಬ್ಬಂದಿ ಪ್ರತಿ ಎಂಟು ಗಂಟೆಗೆ ನಾಲ್ಕು ಜನ ಅರೆ ಸೇನಾಪಡೆ ಯೋಧರು, ಒಬ್ಬ ಅಧಿಕಾರಿ ಈ ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ.
ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಪ್ರತಿದಿನ ಅನೇಕ ಪ್ರಯಾಣಿಕರು ಈ ರಸ್ತೆಯಲ್ಲಿ ಓಡಾರುವುದಲ್ಲದೆ, ಸಿಮೆಂಟ್, ಶಹಾಬಾದ್ ಪರ್ಸಿ, ಹಾರುಬೂದಿ ಸಾಗಾಣಿಕೆ ನಿರಂತರವಾಗಿ ಈ ಮಾರ್ಗವಾಗಿ ಸಾಗುವುದರಿಂದ ಇಲ್ಲಿ ಹೆಚ್ಚಿನ ತನಿಖೆ ಮಹತ್ವದಾಗಿದೆ.
ಭಕ್ತರ ಪರದಾಟ: ಚುನಾವಣೆ ಆಯೋಗ, ಚುನಾವಣೆ ಅಕ್ರಮಗಳ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದರೆ, ಯಾದಗಿರಿಯ ಮೈಲಾರಲಿಂಗ ದೇವಸ್ಥಾನ, ನಾಲವಾರದ ಕೋರಿಸಿದ್ದೇಶ್ವರ ಮಠ, ಸನ್ನತಿಯ ಚಂದ್ರಲಾ ಪರಮೇಶ್ವರಿ ದೇವಸ್ಥಾನ, ಕನಗನಳ್ಳಿ ಬೌದ್ಧ ವಿಹಾರಕ್ಕೆ ಭೇಟಿ ನೀಡಲು ಸ್ವಂತ ವಾಹನಗಳಲ್ಲಿ ಬರುವ ಭಕ್ತರು ತನಿಖೆಯಿಂದ ಗಾಬರಿಯಾಗಿ, ಪರದಾಡುವಂತಾಗಿದೆ.
ಸೇಂದಿಗೂ ಬೇಕು ನಿಗಾ: ಆಂಧ್ರದ ಕೃಷ್ಣಾ, ತಾಂಡೂರಗಳಿಂದ ರೈಲು ಮೂಲಕ ಸೆಂದಿ ಕಳ್ಳಸಾಗಾಣಿಕೆ ಇಲ್ಲಿ ಮಾಮೂಲಾಗಿದ್ದು, ಇವುಗಳ ಮೇಲೆ ಚುನಾವಣೆ ಆಯೋಗ ಪೊಲೀಸರು ನಿಗಾ ವಹಿಸುವುದು ಅವಶ್ಯಕ. ಅಲ್ಲದೆ ಆಂಧ್ರದಿಂದ ಬರುವ ಸೇಂದಿ ಮುಖ್ಯ ರಸ್ತೆಯನ್ನು ಬಿಟ್ಟು ಈ ಭಾಗದಲ್ಲಿರುವ ಅನೇಕ ಒಳರಸ್ತೆಗಳಿಂದ ಪ್ರವೇಶಿಸುವ ಸಾಧ್ಯತೆ ಇದ್ದು, ಆಯೋಗ ಈ ಬಗ್ಗೆ ಕೂಡ ಸೂಕ್ತ ಕ್ರಮ ಕೈಗೊಳ್ಳುವುದು ಅವಶ್ಯಕ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement