ಜೆಡಿಎಸ್ ಪ್ರಚಾರ ಕಚೇರಿಗೆ ರಾಜುಗೌಡ ಚಾಲನೆ
ಹುಣಸಗಿ: ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮತ್ತು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಜನರ ಬೇಡಿಕೆಗಳಿಗೆ ಸ್ಪಂದಿಸಿದ್ದೇನೆ. ರೈತರ ಹಿತ ಕಾಪಾಡಲು ಹಗಲಿರುಳು ಶ್ರಮಿಸಿದ್ದೇನೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಅಭ್ಯರ್ಥಿ ರಾಜುಗೌಡ ಹೇಳಿದರು. ಪಟ್ಟಣದಲ್ಲಿ ಜೆಡಿಎಸ್ ಚುನಾವಣಾ ಪ್ರಚಾರ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.
ಎಸ್ಸಿಪಿ, ಟಿಎಸ್ಪಿ ಯೋಜನೆಯಡಿ ಸಾವಿರಾರು ದಲಿತರ ಹೊಲಗಳಿಗೆ ನೀರಾವರಿ ಒದಗಿಸಿದ್ದೇನೆ. ಅಭಿವೃದ್ಧಿ ವಿಷಯದಲ್ಲಿ ಸಾಕಷ್ಟು ಶ್ರಮಿಸಿದ್ದೇನೆ. ಶಿಕ್ಷಣ, ಕ್ರೀಡೆ, ಸಿಸಿ ರಸ್ತೆ, ಕಾಲುವೆ ಪುನರ್ ನಿರ್ಮಾಣ ಸೇರಿದಂತೆ ಅನೇಕ ಸಮಸ್ಯೆ ಬಗೆಹರಿಸಲು ಒತ್ತು ಕೊಟ್ಟಿದ್ದೇನೆ. ಆದ್ದರಿಂದ ಜನತೆ ನನ್ನ ಮೇಲೆ ವಿಶ್ವಾಸ ಹೊಂದಿದ್ದಾರೆ. ಕೇವಲ ಮಾತನಾಡುವ ವ್ಯಕ್ತಿ ನಾನಲ್ಲ, ಬದಲಾಗಿ ಕೆಲಸ ಮಾಡಿ ತೋರಿಸಿ ಈಗ ಮತ ಕೇಳುತ್ತಿದ್ದೇನೆ. ಆದ್ದರಿಂದ ಕಳೆದ ಬಾರಿ ಚುನಾವಣೆಗಿಂತಲೂ ಈ ಬಾರಿ ಅತಿ ಹೆಚ್ಚಿನ ಮತದಿಂದ ಆರಿಸಿ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜುಗೌಡರ ಸಮ್ಮುಖದಲ್ಲಿ ಅನೇಕರು ಕಾಂಗ್ರೆಸ್, ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾದರು. ಮುಖಂಡರಾದ ನಾಗಣ್ಣಾ ದಂಡಿನ್, ಬಸವರಾಜ ಸ್ಥಾವರಮಠ, ವೀರೇಶ ಚಿಂಚೋಳಿ, ನಿಂಗರಾಜ ಬಾಚಿಮಟ್ಟಿ, ಚಂದ್ರಶೇಖರ ದಂಡಿನ್, ಯಲ್ಲಪ್ಪ ಕುರಕುಂದಿ, ಶಿವನಗೌಡ, ಸಂಗನಗೌಡ ಪಾಟೀಲ, ತಿಪ್ಪಣ್ಣಾ ಚಂದಾ, ಮೈಬೂಬಸಾಬ್ ಬೆಣ್ಣೂರ್, ಎಂ.ಜಿ. ಕೊಣ್ಣೂರ್, ಮೇಲಪ್ಪ ಗುಳಗಿ ಸೇರಿದಂತೆ ಅನೇಕರು ಇದ್ದರು.