ನೀರಿನ ಕೊರತೆ; ಪಪ್ಪಾಯಿ ಗಿಡಗಳಿಗೆ ಟ್ಯಾಂಕರ್ ನೀರು
ಮುದಗಲ್: ಪಟ್ಟಣದ ಹೊರವಲಯದ ಬಾಗಲಕೋಟೆ ರಸ್ತೆಗೆ ಹೊಂದಿಕೊಂಡಿರುವ ಜಮೀನಿನಲ್ಲಿ ರೈತ ಸೋಮನಗೌಡ ಬಯ್ಯಾಪುರ ಬೆಳೆದ ಪಪ್ಪಾಯಿ ಬೆಳೆಗೆ ನೀರಿಲ್ಲದೇ ಬಾಡಿ ಹೋಗಿದ್ದರಿಂದ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ.
ತೈವಾನ್ ರೆಡ್ ಲೇಡಿ ಹೆಸರಿನ ಪಪ್ಪಾಯಿ ಹಾಗೂ ದಾಳಿಂಬೆ ನಾಟಿ ಮಾಡಿದ್ದು, ಹನಿ ನೀರಾವರಿ ತಂತ್ರ ಅಳವಡಿಸಿಕೊಂಡು ಬೆಳೆಯಲಾದ ಪಪ್ಪಾಯಿ ಉತ್ತಮ ಆದಾಯ ತಂದು ಕೊಟ್ಟಿದೆ. ಆದರೆ ಈಗ ಏಕಾಏಕಿ ಕೊಳವೆಬಾಯಿಯಲ್ಲಿ ಅಂತರ್ಜಲ ಕುಸಿದಿರುವುದರಿಂದ ಪಪ್ಪಾಯಿ ಮತ್ತು ದಾಳಿಂಬೆ ಬೆಳೆ ಬಾಡಿ ಹಾಳಾಗಿದೆ. ನಷ್ಟಕ್ಕೊಳಗಾದ ರೈತ ಸೋಮನಗೌಡ ಬಯ್ಯಾಪುರ ದಿಕ್ಕು ತೋಚದೆ ಪಪ್ಪಾಯಿಗೆ ಟ್ಯಾಂಕರ್ ಮೂಲಕ ನೀರು ಹಾಯಿಸುತ್ತಿದ್ದಾನೆ.
ಪತ್ರಿಕೆಯೊಂದಿಗೆ ಮಾತನಾಡಿದ ರೈತ ಸೋಮನಗೌಡ, ಸುಮಾರು 8 ತಿಂಗಳಿಂದ ಪಪ್ಪಾಯಿ ಬೆಳೆಯಲಾಗಿದೆ. ಮೊದಲಿಗೆ ಉತ್ತಮ ಫಸಲು ಬಂದಿದ್ದು 4 ತಿಂಗಳಿಂದ ಸುಮಾರು 8 ಲಕ್ಷ ಮೌಲ್ಯದ ಪಪ್ಪಾಯಿ ಮಾರಾಟ ಮಾಡಲಾಗಿದೆ. ಆದರೆ ಈಗ ಧೀಡರನೆ ಬೋರಿನಲ್ಲಿ ನೀರು ಕಡಿಮೆಯಾಗಿದ್ದು 2 ಸಾವಿರ ಪಪ್ಪಾಯಿ ಗಿಡಗಳಿಗೆ ನೀರು ಸಾಕಾಗದಿರುವುದರಿಂದ ದೂರದ ಬಯ್ಯಾಪುರದಿಂದ ಪ್ರತಿ ಟ್ಯಾಂಕರಿಗೆ 3 ಸಾವಿರ ಖರ್ಚು ಮಾಡಿ ನೀರು ತಂದು ಹೊಲಕ್ಕೆ ಹಾಯಿಸಲಾಗುತ್ತಿದೆ ಎಂದರು. ಭೂಮಿಯಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಬೇರೆ ರೈತರಲ್ಲಿಯೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ.