ಪಾಳುಬಿದ್ದ ತರಕಾರಿ ಮಾರುಕಟ್ಟೆ
ಮುದಗಲ್: ಸಮೀಪದ ಬಯ್ಯಾಪುರದಲ್ಲಿ ನಿರ್ಮಿಸಿದ ತರಕಾರಿ ಮಾರುಕಟ್ಟೆಯ ಶೆಡ್ ನಿರುಪಯುಕ್ತವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಲಿಂಗಸ್ಗೂರು ಎಪಿಎಂಸಿಯ ಆರ್‌ಐಡಿಎಫ್ ಯೋಜನೆಯಡಿ ನಿರ್ಮಿಸಿದ ತರಕಾರಿ ಮಾರುಕಟ್ಟೆ ಮಳಿಗೆಗಳು ಉದ್ಘಾಟನೆಯಾಗದೆ ಹಾಳು ಬಿದ್ದಿದ್ದು, ಸರ್ಕಾರದ ಅನುದಾನ ಸದ್ಬಳಕೆಯಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ತಮ್ಮ ಗ್ರಾಮಕ್ಕೆ ವ್ಯವಸ್ಥಿತ ತರಕಾರಿ ಮಾರುಕಟ್ಟೆ ನಿರ್ಮಿಸಿ ಕೊಟ್ಟಿದ್ದಾರೆ. ಆದರೆ ಅದು ಉದ್ಘಾಟನೆಯಾಗದೇ ಹಾಳು ಬಿದ್ದಿದೆ. ನಿರ್ಮಾಣವಾದಾಗಿನಿಂದ ಸಂತೆ ಶೆಡ್ ಹಾಳು ಬಿದ್ದಿದ್ದು ಕಟ್ಟಡದ ಗೋಡೆಗಳು ಬಿರುಕುಬಿಟ್ಟಿವೆ. ಕಟ್ಟಡದ ಛಾವಣಿಗೆ ಬಳಸಲಾದ ತಗಡುಗಳು ಗಾಳಿಗೆ ಹಾರಿಹೋಗಿವೆ. ಶೆಡ್ಡಿನ ಸೂತ್ತ ಜಾಲಿಗಿಡಗಳು ಬೆಳೆದು ಮುಚ್ಚಿಕೊಂಡಿದೆ.
ಗ್ರಾಮದಲ್ಲಿ ಅವ್ಯವಸ್ಥೆಯ ಆಗರವಾಗಿರುವ ರಸ್ತೆ ಬದಿ ಮತ್ತು ಪುಟ್‌ಪಾತ್ ಮೇಲೆ ತರಕಾರಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಮಾನವನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬಿರುತ್ತಿದ್ದು ಕೂಡಲೇ ಸಂಬಂಧಿಸಿದ ಅಧಿಕಾರಿಗಳು ತರಕಾರಿ ಮಾರುಕಟ್ಟೆ ಕಡೆ ಗಮನಹರಿಸಿ ಮಳಿಗೆಗಳನ್ನು ಉದ್ಘಾಟಿಸಿ ತರಕಾರಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.