ರಾರಾಜಿಸಿದ ಬಂಡಿ ಕ್ಯಾಲೆಂಡರ್!
ಮುದಗಲ್: ರಾಜ್ಯ ಚುನಾವಣಾ ಆಯೋಗ ನೀತಿ ಸಂಹಿತೆ ಜಾರಿ ಮಾಡಿದ್ದರೂ ನಾಗರಹಾಳ ಭಾಗದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.
ಚುನಾವಣೆ ನಿಮಿತ್ತ ಯಾವುದೇ ಪಕ್ಷದ ಅಭ್ಯರ್ಥಿಗಳು ಇರುವ ಪೋಸ್ಟರ್, ಬ್ಯಾನರ್, ಬಂಟಿಂಗ್ಸ್ಗಳನ್ನು ಕಟ್ಟಬಾರದು ಎನ್ನುವ ನಿಯಮವಿದ್ದರೂ ಬಿಎಸ್ಸಾರ್ ಕಾಂಗ್ರೆಸ್ ಲಿಂಗಸ್ಗೂರು ಕ್ಷೇತ್ರದ ಅಭ್ಯರ್ಥಿ ಸಿದ್ದು ಬಂಡಿ ಮತ್ತು ಪಕ್ಷದ ಸಂಸ್ಥಾಪಕ ಶ್ರೀರಾಮುಲು ಭಾವಚಿತ್ರವಿರುವ ಹೊಸ ವರ್ಷದ ಕ್ಯಾಲೆಂಡರ್ಗಳು ಎಲ್ಲೆಂದರಲ್ಲಿ ರಾರಾಜಿಸುತ್ತಿವೆ. ಲಿಂಗಸ್ಗೂರು ವಿಧಾನಸಭೆ ಕ್ಷೇತ್ರದ ಅನೇಕ ಹಳ್ಳಿಗಳಲ್ಲಿ, ನಾಗರಹಾಳ, ಅಂಕನಾಳ, ತೊಂಡಿಹಾಳ, ಹಲ್ಕಾವಟಗಿ, ನರಕಲದಿನ್ನಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಹೊಟೇಲ್, ಮನೆ, ಕಿರಾಣಿ ಅಂಗಡಿ, ಇಸ್ತ್ರಿ ಅಂಗಡಿ, ಎಲೆಕ್ಟ್ರಿಕಲ್ ಅಂಗಡಿಗಳಲ್ಲಿ ಅಭ್ಯರ್ಥಿ ಸಿದ್ದು ಬಂಡಿ ಮತ್ತು ಪಕ್ಷದ ಸಂಸ್ಥಾಪಕ ಶ್ರೀರಾಮುಲು ಭಾವಚಿತ್ರ ಇರುವ ಕ್ಯಾಲೆಂಡರ್ಗಳು ರಾರಾಜಿಸುತ್ತಿದ್ದರೂ ಚುನಾವಣಾಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್ಗಳು ಇತ್ತ ಗಮನಿಸದೆ ಇರುವುದು ಅಭ್ಯರ್ಥಿ ಪ್ರಚಾರಕ್ಕೆ ಮಣೆ ಹಾಕಿದಂತಾಗಿದೆ. ನೀತಿ ಸಂಹಿತೆ ಜಾರಿಯಾಗಿದ್ದರಿಂದ ರಾಜ್ಯ ಸರ್ಕಾರದ ಬ್ಯಾನರ್ಗಳಲ್ಲಿ ಮುಖ್ಯಮಂತ್ರಿಗಳ, ಮಂತ್ರಿಗಳ ಭಾವಚಿತ್ರ ಇದ್ದರೂ ಅವುಗಳನ್ನು ತೆರವುಗೊಳಿಸಲಾಗಿದೆ. ಆದರೆ ಇಲ್ಲಿ ಕ್ಯಾಲೆಂಡರ್ಗಳನ್ನು ತೆರವುಗೊಳಿಸುವ ಗೋಜಿಗೆ ಹೋಗದೆ ಇರುವುದು ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.