ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

371(ಜೆ) ತಿದ್ದುಪಡಿ ಸರ್ಕಾರದ ಸಾಧನೆಯಲ್ಲ; ಟೀಕೆ

Lingaraj Badiger
Updated On : 24 Apr 2013, 11:10 am

ಕ.ಪ್ರ. ವಾರ್ತೆ, ಸಿಂಧನೂರು, ಏ.23
ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371(ಜೆ) ಕಲಂ ತಿದ್ದುಪಡಿಗೆ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ 30 ವರ್ಷಗಳಿಂದ ನಿರಂತರ ಹೋರಾಟ ನಡೆದಿದೆ. ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಂಸದ ಧರಂಸಿಂಗ್ ಅವರಿಗೆ ಸನ್ಮಾನ ಮಾಡಿಸಿಕೊಳ್ಳುವ ನೈತಿಕ ಹಕ್ಕಿಲ್ಲವೆಂದು ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಟೀಕಿಸಿದರು.
ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಮಂಗಳವಾರ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ ನಿರಂತರ ಹೋರಾಟ ನಡೆದಿದೆ. ಆದರೆ 40 ವರ್ಷಗಳಿಂದ ರಾಜ್ಯ ಸರ್ಕಾರದಲ್ಲಿ ವಿವಿಧ ಅಧಿಕಾರದ ಗದ್ದುಗೆಯಲ್ಲಿ ಕುಳಿತು ಅಧಿಕಾರ ಅನುಭವಿಸಿದ ಖರ್ಗೆ ಮತ್ತು ಧರಂಸಿಂಗ್ 371ನೇ ಕಲಂ ತಿದ್ದುಪಡಿಗೆ ಚಕಾರವೆತ್ತಿರಲಿಲ್ಲ. ಹೋರಾಟ ಮಾಡುತ್ತ ಬಂದವರೇ ಬೇರೆ. ನಿಜಕ್ಕೂ ಅವರಿಗೆ ಸನ್ಮಾನ ಸಲ್ಲಬೇಕಾಗಿದೆ ಎಂದರು.
ಜನರ ಹೋರಾಟಕ್ಕೆ ಸಂದ ಜಯ: ಹೈದರಾಬಾದ್ ಕರ್ನಾಟಕದ ಜನ ತೀವ್ರ ಸ್ವರೂಪದ ಹೋರಾಟಕ್ಕಿಳಿದು ದಂಗೆ ಏಳುವ ಸಂದರ್ಭದಲ್ಲಿ ಜನರ ಪ್ರತಿಭಟನೆಗೆ ಹೆದರಿದ ಕೇಂದ್ರ ಸರ್ಕಾರ ಅನಿವಾರ್ಯವಾಗಿ 371ನೇ ಕಲಂ ತಿದ್ದುಪಡಿಗೆ ಅನುವು ಮಾಡಿಕೊಟ್ಟಿತು. ಇದು ಜನರ ಹೋರಾಟಕ್ಕೆ ಸಂದ ಜಯವಾಗಿದೆ. ಇದನ್ನು ಮಲ್ಲಿಕಾರ್ಜುನ ಖರ್ಗೆ ಮತ್ತಿತರರು ತಮ್ಮ ಸಾಧನೆ ಎಂದು ಹೇಳಿಕೊಳ್ಳುವ ನೈತಿಕ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದು ಆಪಾದಿಸಿದರು.
ಹಂಪನಗೌಡ ಗೆಲ್ಲುವುದಿಲ್ಲ: ಕಾಂಗ್ರೆಸ್ ಅಭ್ಯರ್ಥಿ ಈ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಏಕೆಂದರೆ ಅವರ ಜೊತೆ ಯಲ್ಲಿದ್ದ ರಾಜಶೇಖರ ಪಾಟೀಲರು ಬಂಡಾಯ ಎದ್ದಿದ್ದಾರೆ. ಲಿಂಗರಾಜ ಪಾಟೀಲರಿಗೆ ರಾಜಶೇಖರ ಪಾಟೀಲ್ ಸಮೀಪದ ಸಂಬಂಧಿಯಾಗಿರುವುದರಿಂದ ಅವರು ಅನಿವಾರ್ಯವಾಗಿ ರಾಜಶೇಖರ ಪಾಟೀಲರ ಪರ ನಿಲ್ಲುತ್ತಾರೆ. ಅಲ್ಲದೆ ತಮ್ಮ ಪುತ್ರ ಪಂಪನಗೌಡ ಬಾದರ್ಲಿ ಜಿಪಂ ಅಧ್ಯಕ್ಷರಾಗಬೇಕಾದರೆ ನಯಾಪೈಸೆ ಖರ್ಚು ಮಾಡಲಿಲ್ಲ. ಲಿಂಗರಾಜ ಪಾಟೀಲರಿಂದ 1.50 ಕೋಟಿ ಖರ್ಚು ಮಾಡಿಸಿದ ಅಸಮಾಧಾನ ಅವರನ್ನು ಕಾಡುತ್ತಿದೆ ಎಂದು ಭವಿಷ್ಯ ನುಡಿದರು.
ಇನ್ನು ವೆಂಕಟರಾವ್ ನಾಡಗೌಡರು ಅಧಿಕಾರದಲ್ಲಿದ್ದಾಗ ದುರಾಡಳಿತ ನಡೆಸುವ ಮೂಲಕ ಕ್ಷೇತ್ರದಲ್ಲಿ ಅರಾಜಕತೆ ಸೃಷ್ಟಿಸಿದ್ದಾರೆ. ಕಳೆದ ಬಾರಿ ಆಕಸ್ಮಿಕವಾಗಿ ಗೆದ್ದಿರುವುದನ್ನೇ ಆಧಾರವಾಗಿಟ್ಟುಕೊಂಡಿರುವ ಅವರಿಗೆ ನಿರಾಶೆ ಕಟ್ಟಿಟ್ಟ ಬುತ್ತಿ. ಬಂಗಾರದ ಚಮಚ ಬಾಯಲ್ಲಿಟ್ಟುಕೊಂಡು ಜನಿಸಿರುವುದಾಗಿ ಅವರು ಹೇಳಿದ್ದಾರೆ. ಆದರೆ ಅವರು ಬಂಗಾರದಂತೆ ಅಧಿಕಾರ ನಡೆಸಲಿಲ್ಲ. ನಾಡಗೌಡ ಮನೆತನಕ್ಕೆ ಗೌರವವನ್ನು ತರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement