ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಭಿವೃದ್ಧಿಗೆ ಜೆಡಿಎಸ್ ಬೆಂಬಲಿಸಿ

Lingaraj Badiger
Updated On : 24 Apr 2013, 10:59 am

ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು ಏ. 23
ನಾಡಿನ ರೈತರ ಹಾಗೂ ಜನಸಾಮಾನ್ಯರ ಅಭಿವೃದ್ಧಿಗೆ ಜೆಡಿಎಸ್ ಬೆಂಬಲಿಸಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದರು.
ಸ್ಥಳೀಯ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮಂಗಳವಾರ ಜೆಡಿಎಸ್‌ನಿಂದ ಚುನಾವಣಾ ಪ್ರಚಾರದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಾನು ಮುಖ್ಯಮಂತ್ರಿಯಾಗಿ 20 ತಿಂಗಳ ಅವಧಿಯಲ್ಲಿ ಗ್ರಾಮ ವಾಸ್ತವ್ಯ ಮತ್ತು ಜನತಾ ದರ್ಶನ ನಡೆಸುವ ಮೂಲಕ ಜನರ ಸಂಕಷ್ಟಗಳಿಗೆ ತಕ್ಷಣ ಪರಿಹಾರ ಕಂಡುಕೊಳ್ಳುವಲ್ಲಿ ಕೆಲಸ ಮಾಡಿದ್ದು, ಪಕ್ಷ ಪುನಾ ಅಧಿಕಾರಕ್ಕೆ ಬಂದರೆ ರೈತರ ಹಾಗೂ ಜನಸಾಮಾನ್ಯರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಹೇಳಿದರು.
ನಿರ್ಲಕ್ಷ್ಯ: ಈ ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್ ಮತ್ತು ಬಿಜೆಪಿ ಉತ್ತರ ಕರ್ನಾಟಕ ಮತ್ತು ಹೈ-ಕ ಭಾಗದ ನೀರಾವರಿಗೆ ಹೆಚ್ಚಿನ ಆಸಕ್ತಿ ತೋರದೆ ನಿರ್ಲಕ್ಷ್ಯ ತೋರಿವೆ. ಬಿಜೆಪಿ 5 ವರ್ಷದ ಅವಧಿಯಲ್ಲಿ ಜನರ ಸಂಕಷ್ಟಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂದನೆ ನೀಡಿಲ್ಲ. ನೆರೆ ಮತ್ತು ಬರಗಾಲ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಸರಿಯಾಗಿ ಸ್ಪಂದನೆ ನೀಡದೆ ಮತ್ತು ಜನರಿಗೆ ಕಾರ್ಯಕ್ರಮಗಳನ್ನು ರೂಪಿಸದೆ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿದರು.
ವಿವಿಧ ಯೋಜನೆ: ಕಾಂಗ್ರೆಸ್ ಮತ್ತು ಬಿಜೆಪಿ ನಡವಳಿಕೆ ಕುರಿತು ಹೆಚ್ಚಿಗೆ ಟೀಕೆ ಮಾಡದೆ ಜನರಿಗೆ ಯಾವರೀತಿ ಯೋಜನೆ ರೂಪಿಸಬೇಕೆಂಬುದು ಮುಖ್ಯವಾಗಿದೆ. ಚುನಾವಣೆ ಪ್ರಯುಕ್ತ ಪಕ್ಷದ ಪ್ರಣಾಳಿಕೆಯಂತೆ ನೀರಾವರಿಗೆ ಆದ್ಯತೆ, ರೈತರ, ನೇಕಾರರ, ಕುಶಲಕರ್ಮಿಗಳ ಸಾಲಮನ್ನಾ ಯೋಜನೆ, ರೈತರ ಬೆಳೆಗೆ ಬೆಂಬಲ ಬೆಲೆ ನಿಗದಿ, ಕೈಗಾರಿಕೆ ಸ್ಥಾಪನೆ, ಉದ್ಯೋಗಾವಕಾಶ, ವಸತಿ ಮನೆಗಳು, ಆರೋಗ್ಯ, ಬಡ ಹೆಣ್ಣುಮಕ್ಕಳು, ವೃದ್ಧರು, ಅಂಗವಿಕಲರು, ದೇವದಾಸಿಯರ ಅಭಿವೃದ್ಧಿಗೆ ಗೌರವಧನ ಹೆಚ್ಚಳ ಸೇರಿದಂತೆ ಆದ್ಯತೆ ನೀಡಲಾಗುವುದೆಂದು ತಿಳಿಸಿದರು.
ಪ್ರಸಕ್ತ ವಿಧಾನಸಭೆ ಚುನಾವಣೆ ರಾಜ್ಯದ ಜನರ ಮುಂದಿನ ಭವಿಷ್ಯ ನಿರ್ಧರಿಸಲಿದ್ದು, ಪಕ್ಷದ 20 ತಿಂಗಳ ಆಡಳಿತದ ಅವಧಿಯಲ್ಲಿ ಮತ್ತು ಮಾನಪ್ಪ ವಜ್ಜಲರ ಆಡಳಿತ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಗಮನ ಹರಿಸಬೇಕೆಂದು ಮನವಿ ಮಾಡಿದರು.
ಬಹಿರಂಗ ಸಭೆಯಲ್ಲಿ ಲಿಂಗಸ್ಗೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಾನಪ್ಪ ವಜ್ಜಲ್, ಮಸ್ಕಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಮರೇಶ ನಾಯಕ, ಪಕ್ಷದ ಜಿಲ್ಲಾಧ್ಯಕ್ಷ ಮಹಾಂತೇಶ ಪಾಟೀಲ ಅತ್ತನೂರ, ತಾಲೂಕು ಅಧ್ಯಕ್ಷ ಶಿವಾನಂದ ಐದನಾಳ ಇದ್ದರು.

ವ್ಯಕ್ತಿಗತ ಆರೋಪದಲ್ಲಿ ಕಾಂಗ್ರೆಸ್- ಬಿಜೆಪಿ- ಕೆಜೆಪಿ ಕಾಲಹರಣ
ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು ಏ.23
ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಕೆಜೆಪಿ ಪಕ್ಷಗಳ ಕೆಲ ನಾಯಕರು ಪರಸ್ಪರ ವ್ಯಕ್ತಿಗತ ಆರೋಪದಲ್ಲಿ ತೊಡಗಿ ಕಾಲಹರಣ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.
ಪಟ್ಟಣದಲ್ಲಿ ಮಂಗಳವಾರ ಜೆಡಿಎಸ್ ಚುನಾವಣಾ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಜನರ ಸಮಸ್ಯೆ, ಸಂಕಷ್ಟಗಳಿಗೆ ಶಾಶ್ವತ ಪರಿಹಾರ ಒದಗಿಸುವತ್ತ ಗಮನಹರಿಸುವ ಬದಲು ವಿವಿಧ ಪಕ್ಷಗಳ ಕೆಲ ನಾಯಕರು ವ್ಯಕ್ತಿಗಳ ವಿರುದ್ಧ ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರ ವಿರುದ್ಧ ಕೆಜೆಪಿ ಮುಖಂಡರು ಆರೋಪಿಸುತ್ತಾರೆ, ಬಿಜೆಪಿಯನ್ನು ಮುಗಿಸುವುದೇ ನನ್ನ ಗುರಿ ಎಂದು ಹೇಳುತ್ತಾರೆ. ಇಂತಹ ಆರೋಪಗಳಿಗೆ ಕಾಂಗ್ರೆಸ್‌ನವರೂ ಹೊರತಾಗಿಲ್ಲ ಎಂದು ದೂರಿದರು.
ರಾಹುಲ್ ಗಿಮಿಕ್ ಫಲಿಸದು: ರಾಜ್ಯದಲ್ಲಿ ವಿವಿಧ ಪಕ್ಷಗಳ ಮುಖಂಡರು ತಮ್ಮ ವ್ಯಕ್ತಿತ್ವ, ತಾವು ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸಭೆ ಮತ್ತು ಮಾಧ್ಯಮಗಳ ಮೂಲಕ ಜನರಿಗೆ ದಿಕ್ಕು ತಪ್ಪಿಸುತ್ತಿದ್ದು, ಬರಗಾಲದಿಂದ ತತ್ತರಿಸಿದ ಜನತೆ ಬಗ್ಗೆ ಕಾಳಜಿ ವಹಿಸದೆ ನೀರಾವರಿಗೆ ಆದ್ಯತೆ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ. ಚುನಾವಣೆ ಪ್ರಯುಕ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪ್ರಚಾರದ ಗಿಮಿಕ್ ಫಲಿಸುವುದಿಲ್ಲವೆಂದೂ ಟೀಕಿಸಿದರು.
ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿದ್ದು ದೇವೇಗೌಡರು: ಉತ್ತರ ಕರ್ನಾಟಕ ಭಾಗದಲ್ಲಿ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿದ್ದೇ ಪಕ್ಷದ ವರಿಷ್ಠ ದೇವೇಗೌಡರು. ಅದರಂತೆ ನಾರಾಯಣಪುರ ಕಾಲುವೆಗಳ ನಿರ್ಮಾಣ ಆರಂಭಕ್ಕೆ ಆದ್ಯತೆ ನೀಡಲಾಯಿತು. ಅಲ್ಲದೆ ಈ ಭಾಗದ ಜನರಿಗೆ ಮೂಲಸೌಲಭ್ಯ ಕಲ್ಪಿಸುವತ್ತ ಪಕ್ಷ ಯಾವ ರೀತಿ ಗಮನಹರಿಸಿದೆ ಎಂಬುದನ್ನು ಜನ ಗಮನಿಸಲಿದ್ದಾರೆ. ಇಂತಹ ಹತ್ತಾರು ಕಾರ್ಯಕ್ರಮಗಳ ಜಾರಿಯಿಂದ ಚುನಾವಣೆಯಲ್ಲಿ ಜನತೆ ಪಕ್ಷದ ಕೈ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಪಕ್ಷದ ಜಿಲ್ಲಾಧ್ಯಕ್ಷ ಮಹಾಂತೇಶ ಪಾಟೀಲ ಅತ್ತನೂರ, ಲಿಂಗಸ್ಗೂರು ಕ್ಷೇತ್ರದ ಅಭ್ಯರ್ಥಿ ಮಾನಪ್ಪ ವಜ್ಜಲ್, ಮಸ್ಕಿ ಕ್ಷೇತ್ರದ ಅಭ್ಯರ್ಥಿ ಅಮರೇಶ ನಾಯಕ, ಮುಖಂಡರಾದ ನಾಗಪ್ಪ ವಜ್ಜಲ್, ಕರಿಯಪ್ಪ ವಜ್ಜಲ್, ಗಿರಿಮಲ್ಲನಗೌಡ ಕರಡಕಲ್, ಶಿವಾನಂದ ಐದನಾಳ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement